ಕೋಲಾರ | ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕನ್ನಡ ಪರಿಚಾರಕ - 2024 ಪ್ರಶಸ್ತಿ ಘೋಷಣೆ

Update: 2024-10-29 17:02 GMT

ಕೋಲಾರ : ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸಿ ತಮ್ಮದೇ ಆದ ಕೊಡುಗೆ ನೀಡಿದವರಿಗೆ ನೀಡುವ ಕನ್ನಡ ಪರಿಚಾರಕ ಪ್ರಶಸ್ತಿಗೆ ಹಿರಿಯ ಕನ್ನಡ ಲೇಖಕ ಮತ್ತು ಕನ್ನಡಪರ ಹೋರಾಟಗಾರ ಕೋಲಾರದ ಕೆ.ರಾಜಕುಮಾರ್ ಮತ್ತು ಕನ್ನಡ ಗಾಯಕ ಹಾಗೂ ನಿವೃತ್ತ ಶಿಕ್ಷಕ ಕೋಲಾರದ ಸುಲೈಮಾನ್‌ ಖಾನ್ ಆಯ್ಕೆಯಾಗಿದ್ದಾರೆ.

ಕೋಲಾರದ ಕೆ.ರಾಜಕುಮಾರ್ ವಿದ್ಯಾರ್ಥಿ ದಿಸೆಯಿಂದಲೂ ಕನ್ನಡಪರ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಲ್ಲದೇ ತಮ್ಮ ಬರಹ ಮತ್ತು ಭಾಷಣಗಳ ಮೂಲ ರಾಜ್ಯಾದ್ಯಂತ ಅತ್ಯುತ್ತಮ ಕನ್ನಡಪರ ಸಂಪನ್ಮೂಲ ವ್ಯಕ್ತಿಯಾಗಿ ಚಿರಪರಿಚಿತರಾಗಿದ್ದಾರೆ.

ಶಿಕ್ಷಕರಾಗಿದ್ದ ಕೋಲಾರದ ಸುಲೈಮಾನ್‌ ಖಾನ್ ಸರಕಾರಿ ವೃತ್ತಿಯ ಜೊತೆಗೆ ಕನ್ನಡ ಸೇವೆಯನ್ನು ಪ್ರವೃತ್ತಿ ಮಾಡಿ ಕೊಂಡವರು. ಕನ್ನಡಪರ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದ ಇವರು, ಕನ್ನಡ ಗೀತಗಾಯನದ ಮೂಲಕ ಗಮನ ಸೆಳೆದವರು. ಈ ಇಬ್ಬರು ಹಿರಿಯ ಕನ್ನಡಪರ ಹೋರಾಟಗಾರರನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತನ್ನ 2ನೇ ವರ್ಷದ ಕನ್ನಡ ಪರಿಚಾರಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. 

ನಾಳೆ ಪ್ರಶಸ್ತಿ ಪದಾನ :

ಕನ್ನಡ ರಾಜ್ಯೋತ್ಸವ ದಿನಕ್ಕೆ ಪೂರ್ವಭಾವಿಯಾಗಿ ಅ.30ರಂದು ಬೆಳಗ್ಗೆ 10:30ಕ್ಕೆ ಕೋಲಾರದ ಅಂತರಗಂಗೆ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಕೆ.ಚಂದ್ರಶೇಖರ್ ಮತ್ತು ಖಜಾಂಚಿ ಎ.ಜಿ.ಸುರೇಶ್ ಕುಮಾ‌ರ್ ತಿಳಿಸಿದ್ದಾರೆ.

ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಎನ್‌ಬಿ.ಗೋಪಾಲಗೌಡ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೆಯುಡಬ್ಲ್ಯೂಜೆ ಖಜಾಂಚಿ ಎಂ.ವಾಸುದೇವಹೊಳ್ಳ. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್‌. ಗಣೇಶ್, ವಿ.ಮುನಿರಾಜು ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News