ಕೇಂದ್ರ ಸರಕಾರ ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಮಾಡಲಿ: ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್

Update: 2024-02-06 17:15 GMT

ಬೆಂಗಳೂರು: ಕೇಂದ್ರ ಸರಕಾರ ಮಹಿಳಾ ಮೀಸಲಾತಿ ಘೋಷಣೆ ಮಾಡಿದೆ. ಆದರೆ ಜಾರಿ ಮಾಡಲಿಲ್ಲ. ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಅವರಿಗೆ ನೀಜಕ್ಕೂ ಈ ವಿಚಾರದಲ್ಲಿ ಇಚ್ಛಾಶಕ್ತಿ ಇದ್ದರೆ ಈ ಚುನಾವಣೆಯಲ್ಲಿ ಇದನ್ನು ಜಾರಿ ಮಾಡಬಹುದು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಹೇಳಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇನ್ನು ಕಾಲ ಮಿಂಚಿಲ್ಲ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಬಹುಮತವಿರುವ ಬಿಜೆಪಿ ಈ ಕಾಯ್ದೆ ಜಾರಿ ಮಾಡಬೇಕು. ಆ ಮೂಲಕ ತಾವು ಮಹಿಳೆಯರ ಪರವಿರುವುದನ್ನು ಸಾಬೀತುಪಡಿಸಲಿ ಎಂದರು.

ಮಹಿಳೆಯರ ಮೇಲಿನ ದೌರ್ಜನ್ಯ ವಿಚಾರದಲ್ಲಿ ನಮ್ಮ ದೇಶದ ಕಾನೂನು ಎಷ್ಟೇ ಕಠಿಣವಾದರೂ ಮಹಿಳೆಯರ ರಕ್ಷಣೆ ಆಗುತ್ತಿಲ್ಲ. ಹತ್ರಾಸ್ ಪ್ರಕರಣದಿಂದ ಬಿಲ್ಕಿಸ್ ಬಾನು ಅವರ ಪ್ರಕರಣಗಳೇ ಸಾಕ್ಷಿ. ಬಿಲ್ಕಿಸ್ ಬಾನು ಅವರ ಪ್ರಕರಣದಲ್ಲಿ ಅಪರಾಧಿಗಳಿಗೆ ಕ್ಷಮೆ ನೀಡಿ ಅವರನ್ನು ಬಿಡುಗಡೆ ಮಾಡಿ ಸಂಭ್ರಮಿಸಲಾಗಿತ್ತು. ಹೀಗಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡುವಂತಾಗಬೇಕು ಎಂದು ಅವರು ತಿಳಿಸಿದರು.

ಬಿಜೆಪಿ ಸರಕಾರವು ಮಹಿಳೆಯರ ವಿರುದ್ಧ ಅತ್ಯಂತ ಘೋರ ಅಪರಾಧಗಳನ್ನು ಮಾಡುವವರನ್ನು ರಕ್ಷಿಸುವ ಮೂಲಕ ನ್ಯಾಯಕ್ಕಾಗಿ ಮಹಿಳೆಯರ ಹೋರಾಟದ ಮೇಲೆ ಪೈಶಾಚಿಕ ನಿಲುವನ್ನು ತೋರಿಸಿದೆ. ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡುವ ಮೂಲಕ, ಮಣಿಪುರ ಪ್ರಕರಣದಲ್ಲಿ ಕಿವುಡ ಮೌನ, ಮಹಿಳಾ ಕುಸ್ತಿಪಟುಗಳ ಪ್ರಕರಣದಲ್ಲಿ ಬಿಜೆಪಿ ಸಂಸದರ ರಕ್ಷಣೆ ಇತ್ತೀಚಿನ ಪ್ರಕರಣವಾಗಿದೆ ಎಂದು ಪುಷ್ಪಾ ಅಮರನಾಥ್ ಹೇಳಿದರು.

ಮಹಿಳೆಯರ ವಿರುದ್ಧ ನಡೆಯುತ್ತಿರುವ ಅವಹೇಳನಕಾರಿ ಭಾಷೆ ಮತ್ತು ಬೀದಿಗಳಲ್ಲಿ ಮತ್ತು ಆನ್‍ಲೈನ್‍ನಲ್ಲಿ ಅವ್ಯಾಹತವಾಗಿ ಟ್ರೋಲ್ ಸಂಸ್ಕೃತಿಯ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ಅನ್ಯಾಯದ ವಿರುದ್ಧ ಬಿಜೆಪಿಯ ಮಹಿಳಾ ಮುಖಂಡರು ಸೇರಿದಂತೆ ಸರಕಾರವು ಬಲವಾದ ನಿಲುವು ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

2024ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಮಹಿಳೆಯರ ಬೇಡಿಕೆಯನ್ನು ಚರ್ಚೆ ಮಾಡಿ ನಾವು ಪ್ರಸ್ತಾವನೆ ಸಲ್ಲಿಸುತ್ತೇವೆ. ಮಹಿಳೆಯರ ಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟಿದ್ದು ನಮಗೆ ಬೇಕಾದ ಬೇಡಿಕೆಗಳನ್ನು ಪಕ್ಷದ ಮುಂದೆ ಇಡುತ್ತೇವೆ ಎಂದು ಪುಷ್ಪಾ ಅಮರನಾಥ್ ಹೇಳಿದರು.

ಪ್ರಮುಖವಾಗಿ ಮಹಿಳೆಯರಿಗೆ ಬೆಲೆ ಏರಿಕೆ ನಡುವೆ ಆರ್ಥಿಕ ಶಕ್ತಿ ನೀಡಬೇಕು, ಉದ್ಯೋಗ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಸಾಮಾಜಿಕ ಸಬಲೀಕರಣ, ಆರೋಗ್ಯದ ಸಬಲೀಕರಣ, ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಳ, ರಾಜಕೀಯ ಸಬಲೀಕರಣದ ಬೇಡಿಕೆಗಳನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News