ಲೋಕಸಭಾ ಚುನಾವಣೆ | ಬಹಿರಂಗ ಪ್ರಚಾರಕ್ಕೆ ತೆರೆ, ನಾಳೆ(ಎ.25) ಸಂಜೆವರೆಗೆ ಮನೆ ಮನೆ ಪ್ರಚಾರಕ್ಕೆ ಅವಕಾಶ
ಬೆಂಗಳೂರು : ಲೋಕಸಭಾ ಚುನಾವಣೆಯ ಮೊದಲ ಹಂತದ ಬಹಿರಂಗ ಪ್ರಚಾರ ಬುಧವಾರ ಸಂಜೆ 6 ಗಂಟೆಗೆ ಕೊನೆಗೊಂಡಿದ್ದು, ಗುರುವಾರ ಸಂಜೆ 6 ಗಂಟೆ ವರೆಗೆ ಮಾತ್ರ ಮನೆ ಮನೆ ಪ್ರಚಾರ ಮಾಡಬಹುದಾಗಿದೆ.
ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿರುವ 14 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಹಿರಂಗ ಪ್ರಚಾರ ತೆರೆ ಅನ್ವಯ ಆಗಲಿದ್ದು, ಧ್ವನಿವರ್ಧಕ, ಪ್ರಚಾರ ವಾಹನ, ಭಾಷಣ, ಬಹಿರಂಗ ಸಮಾವೇಶ, ರೋಡ್ ಶೋ ನಡೆಸುವಂತಿಲ್ಲ.
ಗುರುವಾರ ನಿಗದಿತ ಸಂಖ್ಯೆಯ ಬೆಂಬಲಿಗರೊಂದಿಗೆ ಮತದಾರರ ಮನೆ ಬಾಗಿಲಿಗೆ ತೆರಳಲಿರುವ ಅಭ್ಯರ್ಥಿಗಳು, ಮನವೊಲಿಕೆಗೆ ಅಂತಿಮ ಹಂತದ ಕಸರತ್ತು ನಡೆಸಬಹುದಾಗಿದೆ. ಇನ್ನೂ, ಬುಧವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ಈ ಅವಧಿಯಲ್ಲಿ ಮನೆ ಮನೆ ಪ್ರಚಾರ ನಡೆಸುವಾಗಲೂ ಅಭ್ಯರ್ಥಿಗಳು ಧ್ವನಿವರ್ಧಕ ಬಳಕೆ ಮಾಡುವ ಹಾಗಿಲ್ಲ. ಅಲ್ಲದೆ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ದ್ವೇಷ ಭಾಷಣ 23 ಪ್ರಕರಣ ದಾಖಲು..!
ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ವಿವಿಧ ರಾಜಕೀಯ ಪಕ್ಷಗಳ ವಿರುದ್ಧ 23 ಪ್ರಕರಣಗಳು ದಾಖಲಾಗಿವೆ.
ಮತದಾರರಿಗೆ ಆಮಿಷ ಒಡ್ಡಿದ ಆರೋಪದಡಿ 28 ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ವಿರುದ್ಧ 8, ಕಾಂಗ್ರೆಸ್ ವಿರುದ್ಧ 9 ಮತ್ತು ಜೆಡಿಎಸ್ ವಿರುದ್ಧ 3 ಹಾಗೂ ಪಕ್ಷೇತರರ ವಿರುದ್ಧ 8 ಪ್ರಕರಣಗಳು ದಾಖಲಾಗಿವೆ. ಚುನಾವಣಾ ಪ್ರಚಾರಕ್ಕೆ ಧಾರ್ಮಿಕ ಸ್ಥಳಗಳನ್ನು ಬಳಸಿಕೊಂಡ ಆರೋಪದಡಿ ಬಿಜೆಪಿ ವಿರುದ್ಧ 8, ಕಾಂಗ್ರೆಸ್ ವಿರುದ್ಧ 6 ಮತ್ತು ಜೆಡಿಎಸ್ ವಿರುದ್ಧ 1 ಪ್ರಕರಣ ದಾಖಲಿಸಲಾಗಿದೆ. ಗಂಭೀರ ಸ್ವರೂಪದ ಚುನಾವಣಾ ಮಾದರಿ ಸಂಹಿತೆ ಉಲ್ಲಂಘನೆ ಆರೋಪದಡಿ ಈವರೆಗೆ 189 ಪ್ರಕರಣ ದಾಖಲು ಮಾಡಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದರು.
ಪೆನ್ ಡ್ರೈವ್ ವಿರುದ್ಧ ದೂರು..!
ಹಾಸನ ಕ್ಷೇತ್ರದಲ್ಲಿ ಪೆನ್ ಡ್ರೈವ್ ಹಂಚಿ ತಮ್ಮ ತೇಜೋವಧೆ ಮಾಡಲಾಗುತ್ತಿದೆ ಎಂದು ಲೋಕಸಭೆಗೆ ಸ್ಪರ್ಧಿಸಿದ ಅಭ್ಯರ್ಥಿಯೊಬ್ಬರು ದೂರು ನೀಡಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಮನೋಜ್‍ಕುಮಾರ್ ಮೀನಾ ಪ್ರತಿಕ್ರಿಯಿಸಿದರು.