ಬಿಜೆಪಿ-ಜೆಡಿಎಸ್‍ನದ್ದು ಹಾದಿ ತಪ್ಪಿದ ಯಾತ್ರೆ : ಮಂಜುನಾಥ ಭಂಡಾರಿ

Update: 2024-07-30 15:27 GMT

ಬೆಂಗಳೂರು : ಬಿಜೆಪಿ-ಜೆಡಿಎಸ್‍ನವರ ಯಾತ್ರೆ ಹಾದಿ ತಪ್ಪಿದೆ. ಅವರು, ರಾಜ್ಯದ ಜನರಿಗೆ ಸೌಲಭ್ಯ ಕಲ್ಪಿಸಲು ದಿಲ್ಲಿಗೆ ಯಾತ್ರೆ ಮಾಡಬೇಕಿತ್ತು. ಅದು ಬಿಟ್ಟು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧ ಪಾದಯಾತ್ರೆ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ತಿರುಗೇಟು ನೀಡಿದ್ದಾರೆ.

ಮಂಗಳವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಬಿಜೆಪಿ-ಜೆಡಿಎಸ್ 21 ಹಗರಣಗಳು ಬಯಲಾಗುವ ಭಯದಲ್ಲಿ ಮೈತ್ರಿ ಪಕ್ಷದವರು ಪಾದಯಾತ್ರೆಯ ನಾಟಕ ಆರಂಭಿಸಿ, ಜನರ ದಾರಿ ತಪ್ಪಿಸುತ್ತಿದ್ದಾರೆ. ಕೇಂದ್ರ ಬಜೆಟ್‍ನಲ್ಲಿ ರಾಜ್ಯಕ್ಕೆ ಯಾವುದೇ ಅನುದಾನ ಕೊಟ್ಟಿಲ್ಲ. ಬಜೆಟ್ ಮೇಲೆ ಭಾಷಣ ನಡೆಯುತ್ತಿದ್ದರೂ ರಾಜ್ಯದ ಮೈತ್ರಿ ನಾಯಕರು ಅಲ್ಲಿ ಈ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಟೀಕಿಸಿದ್ದಾರೆ.

‘ಜಿಎಸ್‍ಟಿ ಪಾಲನ್ನು ಕೇಂದ್ರ ರಾಜ್ಯಕ್ಕೆ ಸಮರ್ಪಕವಾಗಿ ನೀಡಿಲ್ಲ. ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರತಿಭಟನೆ ಮಾಡಬೇಕಿದ್ದವರು, ಅದಕ್ಕಾಗಿ ಕೊಡಿಸಲು ದಿಲ್ಲಿ ಚಲೋ ಮಾಡಬೇಕಿದ್ದವರು, ಪ್ರಚಾರಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ. ರಾಜಕೀಕರಣಕ್ಕೋಸ್ಕರ ಮೈಸೂರು ಚಲೋ ಬದಲು, ಅದನ್ನು ರದ್ದು ಮಾಡಿ ರಾಜ್ಯದ ಜನರಿಗೋಸ್ಕರ, ಪ್ರಧಾನಮಂತ್ರಿ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲು ದಿಲ್ಲಿ ಚಲೋ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೊನೆಯ ಯಾತ್ರೆ: ಈ ಹಿಂದೆ ಬಿಜೆಪಿಯವರು ಭ್ರಷ್ಟಾಚಾರ ಮಾಡಿ, ಜನರಿಗೆ ಅನ್ಯಾಯ ಮಾಡಿದ್ದಕ್ಕೆ, ಮತದಾರರಿಗೆ ಮೋಸ ಮಾಡಿದ್ದಕ್ಕೆ, ಸುಳ್ಳು ಹೇಳಿ ರಾಜ್ಯದ ಮಾನ ಹರಾಜು ಹಾಕಿದ್ದಕ್ಕೆ, ರಾಜ್ಯದ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿದರು. 136 ಸೀಟುಗಳನ್ನು ಕಾಂಗ್ರೆಸ್‍ಗೆ ನೀಡಿದರು. ಲೋಕಸಭಾ ಚುನಾವಣೆಯಲ್ಲಿ ಚಾರ್ ಸೌ ಪಾರ್ ಎನ್ನುತ್ತಿದ್ದವರಿಗೆ 240ಕ್ಕೆ ಸೀಮಿತಗೊಳಿಸಿದರು. ಇದು ಇವರ ಕೊನೆಯ ಯಾತ್ರೆಯಾಗಲಿದೆ ಎಂದು ಮಂಜುನಾಥ ಭಂಡಾರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News