ನಾಳೆಯಿಂದ ರಾಜ್ಯದಲ್ಲಿ ಅಭಿಯಾನ ಮಾದರಿಯಲ್ಲಿ ಪೋಡಿ ದುರಸ್ಥಿ: ಸಚಿವ ಕೃಷ್ಣ ಬೈರೇಗೌಡ

Update: 2024-11-29 21:57 IST
Editor : Ashik
Photo of Press meet
  • whatsapp icon

ಬೆಂಗಳೂರು : ರಾಜ್ಯದಲ್ಲಿ ಒಟ್ಟು 1.96 ಲಕ್ಷ ಸರಕಾರಿ ಸರ್ವೇ ನಂಬರ್ಗಳಿದ್ದು, ಅಭಿಯಾನದ ರೀತಿಯಲ್ಲಿ ಪೋಡಿ ದುರಸ್ಥಿ ಮಾಡಲಾಗುವುದು. ಇದಕ್ಕಾಗಿ ಶನಿವಾರ(ನ.30)ದಂದು ಹಾಸನದಲ್ಲಿ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ಧಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನಾ ಸರಕಾರಿ ಯೋಜನೆಗಳ ಅಡಿ ಕಳೆದ 30-40 ವರ್ಷಗಳಿಂದ ಲಕ್ಷಾಂತರ ಜನರಿಗೆ ಸರಕಾರಿ ಜಮೀನು ಮಂಜೂರಾಗಿದೆ. ಆದರೆ, ಈವರೆಗೆ ಪೋಡಿ ದುರಸ್ಥಿ ಆಗಿಲ್ಲ. ದಾಖಲೆ ಪಕ್ಕ ಆಗಿಲ್ಲ. ಇಂತಹ ಪ್ರಕರಣಗಳೇ ಕನಿಷ್ಟ 25 ಲಕ್ಷ ಇರಬಹುದು ಎಂದು ಹೇಳಿದರು.

ಪಕ್ಕ ಪೋಡಿ ದುರಸ್ಥಿ ಮಾಡಲು ನಮೂನೆ 1 ರಿಂದ 5 ಹಾಗೂ 5 ರಿಂದ 10 ದಾಖಲೆ ಲಭ್ಯವಿರಬೇಕು. ಆದರೆ, ಈ ದಾಖಲೆಗಳಿಲ್ಲದೆ ಲಕ್ಷಾಂತರ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರಕಾರಿ ಕಚೇರಿಗಳಿಗೆ ದಶಕಗಳಿಂದ ಅಲೆಯುತ್ತಿದ್ದರೂ ಪರಿಹಾರ ಮಾತ್ರ ಲಭ್ಯವಾಗಿಲ್ಲ ಎಂದು ಅವರು ವಿಷಾದಿಸಿದರು.

ಕಳೆದ ಒಂದು ವರ್ಷದಿಂದ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸತತ ಸಭೆ ನಡೆಸಿ, ಚರ್ಚಿಸಿ ಕೊನೆಗೂ ನಮೂನೆ 1 ರಿಂದ 5 ಪೋಡಿ ದುರಸ್ಥಿ ಕೆಲಸವನ್ನು ಸರಳೀಕರಣಗೊಳಿಸಿ ಇದೀಗ ಸರಕಾರಿ ಆದೇಶ ಹೊರಡಿಸಲಾಗಿದೆ. ಆನ್‌ಲೈನ್ ನಲ್ಲಿ ಡಿಜಿಟಲ್ ಪ್ರಕ್ರಿಯೆಗಾಗಿ ಆ್ಯಪ್ ರೂಪಿಸಲಾಗಿದೆ. 1.96 ಲಕ್ಷ ಸರಕಾರಿ ಸರ್ವೇ ನಂಬರ್ಗಳನ್ನೂ ದುರಸ್ಥಿಗೊಳಿಸಬೇಕು ಎಂಬುದು ನಮ್ಮ ಗುರಿ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಮೊದಲ ಹಂತದಲ್ಲಿ ಈಗಾಗಲೇ 27,107 ಫೈಲ್ ಸೃಷ್ಟಿಸಲಾಗಿದೆ. ಈ ಸಂಬಂಧ ಡಾಟಾ ಎಂಟ್ರಿ ಕೆಲಸವೂ ನಡೆಯುತ್ತಲೇ ಇದೆ. ಇದರ ಜೊತೆ ಜೊತೆಗೆ ನಮೂನೆ 6 ರಿಂದ 10 ರ ಸರ್ವೇ ಕೆಲಸಕ್ಕೆ ಶನಿವಾರದಿಂದಲೇ(ನ.30)ಹಾಸನದಿಂದ ವಿದ್ಯುಕ್ತ ಚಾಲನೆ ನೀಡಲಾಗುವುದು. ಸಮಾರಂಭದಲ್ಲಿ 200 ಜನಕ್ಕೆ ಪೋಡಿ ದುರಸ್ಥಿ ಮಾಡಿ ಹೊಸ ಸರ್ವೇ ನಂಬರ್ ನೀಡಲಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಪೋಡಿ ದುರಸ್ಥಿ ಅಭಿಯಾನವು ಕೇವಲ ಕಾಗದದಿಂದ ಮಾತ್ರವಲ್ಲ, ಭೌತಿಕವಾಗಿಯೂ ಆರಂಭವಾಗಲಿದ್ದು, ಈ ಕೆಲಸ ಸಂಪೂರ್ಣವಾಗಿ ಮುಗಿದರೆ ಕನಿಷ್ಟ 20 ರಿಂದ 25 ಲಕ್ಷ ರೈತ ಕುಟುಂಬಗಳ ಹಲವು ದಶಕಗಳ ಸಮಸ್ಯೆ ಬಗೆಹರಿಯಲಿದೆ ಎಂದು ಕೃಷ್ಣ ಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Similar News