ಬ್ಲಾಕ್‌ಮೇಲ್ | ಮಹಿಳೆ ವಿರುದ್ಧ ದೂರು ದಾಖಲಿಸಿದ ಶಾಸಕ ವಿನಯ್ ಕುಲಕರ್ಣಿ
ಬೆಂಗಳೂರು : ‘ನನ್ನ ವಿರುದ್ಧ ಮಹಿಳೆಯೊಬ್ಬರು ಕಿರುಕುಳ ಆರೋಪ ಹೊರಿಸಿದ್ದಾರೆ ಮತ್ತು ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥರೊಬ್ಬರು 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆʼ, ಎಂದು ಮಾಜಿ ಸಚಿವ, ಹಾಲಿ ಶಾಸಕ ವಿನಯ್ ಕುಲಕರ್ಣಿ ಇಲ್ಲಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಈ ಬೆಳವಣಿಗೆಗಳ ಮಧ್ಯೆ ಆ ಮಹಿಳೆಯು ಮಂಗಳವಾರ ಪ್ರತಿ ದೂರು ನೀಡಿದ್ದು, ಎಫ್‍ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ‘2022ರಲ್ಲಿ ಹಾವೇರಿ ಜಿಲ್ಲೆಯ ರೈತ ಹೋರಾಟಗಾರ್ತಿಯೊಬ್ಬರು ಎಂದು ಹೇಳಿಕೊಂಡು ಕರೆ ಮಾಡಿ ಮಾತನಾಡಿದ್ದರು. ಇದೀಗ ಅವರು ತನಗೆ ವಂಚನೆ ಮಾಡಲಾಗಿದೆ. ನೀವು ಮಾತನಾಡಿರುವ ವಿಡಿಯೊ ಕಾಲ್, ಮೊಬೈಲ್ ಸಂಭಾಷಣೆ ಪ್ರಸಾರ ಮಾಡಲಾಗುವುದು ಎಂದು ಷಂಡ್ಯಂತ್ರ ರೂಪಿಸಿದ್ದರು’ ಎಂದು ವಿನಯ್ ಕುಲಕರ್ಣಿ ದೂರಿದ್ದಾರೆ.
‘ಈ ಸಂಬಂಧ ಸೆ.24ರಂದು ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥರೊಬ್ಬರು ಕರೆ ಮಾಡಿ 2 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡಲಿಲ್ಲ ಎಂದರೆ ‘ಕಾಂಗ್ರೆಸ್ ಶಾಸಕನ ಅತ್ಯಾಚಾರ ಪ್ರಕರಣ’ ಎಂದು ಪ್ರೊಮೋ ಕಳುಹಿಸಿದ್ದರು. ಕಲ್ಪಿತ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ಹೇರಿತು. ಆ ಹಿನ್ನೆಲೆಯಲ್ಲಿ ನಾನು ನೀಡಿದ್ದ ದೂರನ್ನು ಆಧರಿಸಿ ಕಲಂ 157 ಸಿಆರ್‍ಪಿ(ಎ) ಮತ್ತು (ಬಿ), 176 ಬಿಎನ್‍ಎಸ್ ಕಾಯ್ದೆಡಿ ಪ್ರಕರಣ ದಾಖಲಾಗಿದೆ.
ಸತ್ಯಕ್ಕೆ ದೂರವಾದದ್ದು : ‘ನನ್ನ ವಿರುದ್ಧದ ಷಡ್ಯಂತ್ರ ಇದು. ನಾನು ಆ ಮಹಿಳೆಯನ್ನು ಮುಟ್ಟಿದ್ದರೆ ನನ್ನ ತಾಯಿಯನ್ನು ಮುಟ್ಟಿದ ಹಾಗೆ. ಕೇವಲ ಎರಡು-ಮೂರು ಸಲ ನಡೆದ ವಿಡಿಯೊ ಕಾಲ್ ಸಂಭಾಷಣೆ ಇಟ್ಟುಕೊಂಡು ಹೀಗೆ ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಬದುಕಿದ್ದೇನೆ. ಇದರಲ್ಲಿ ನನ್ನದೇನೂ ಪಾತ್ರ ಇಲ್ಲ. ನಾನೂ ದೂರು ಕೊಟ್ಟಿದ್ದೇನೆ. ಈ ಬಗ್ಗೆ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಬರಲಿ’
-ವಿನಯ್ ಕುಲಕರ್ಣಿ, ಧಾರವಾಡ ಕ್ಷೇತ್ರದ ಶಾಸಕ