ಬೆಂಗಳೂರು| ಮಹಿಳೆಯ ಹತ್ಯೆ ಪ್ರಕರಣ: ಮದುವೆಗೆ ನಿರಾಕರಿಸಿದ್ದಕ್ಕೆ ಚಾಕು ಇರಿದಿರುವುದಾಗಿ ತಪ್ಪೊಪ್ಪಿಕೊಂಡ ಆರೋಪಿ
ಬೆಂಗಳೂರು: ಇಲ್ಲಿನ ಜಯನಗರದಲ್ಲಿ ನಡೆದ ಫರೀದಾ ಖಾನಂ ಎಂಬ ಮಹಿಳೆಯ ಹತ್ಯೆ ಪ್ರಕರಣ ಸಂಬಂಧ ಮದುವೆಗೆ ನಿರಾಕರಿಸಿದ್ದಕ್ಕೆ ಚಾಕು ಇರಿದಿರುವುದಾಗಿ ಆರೋಪಿ ಗಿರೀಶ್ ಎಂಬಾತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮಹಿಳೆಯ ಹತ್ಯೆ ಬಳಿಕ ಜಯನಗರ ಠಾಣೆಗೆ ಶರಣಾಗಿದ್ದ ಆರೋಪಿ ಗಿರೀಶ್ ಯಾನೆ ರೆಹಾನ್‍ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬಯಲಾಗಿದೆ.
ಬೆಂಗಳೂರಿನ ಯಡಿಯೂರಿನ ನಿವಾಸಿಯಾಗಿರುವ ಆರೋಪಿ ಗಿರೀಶ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಈತ 2011ರಲ್ಲಿ ಇಸ್ಲಾಂ ಧರ್ಮಕ್ಕೆ ಸ್ವೀಕರಿಸಿ ರೆಹಾನ್ ಎಂದು ಹೆಸರು ಬದಲಿಸಿಕೊಂಡಿದ್ದ. ಬಳಿಕ ಮನೆಯಲ್ಲಿ ಸಮಸ್ಯೆ ಆರಂಭವಾಗಿತ್ತು. ಹಾಗಾಗಿ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ್ದ ಎನ್ನಲಾಗಿದೆ.
ಹೀಗಿರುವಾಗಲೇ 32 ವರ್ಷ ವಯಸ್ಸಿನ ಗಿರೀಶ್‍ಗೆ 2022ರಲ್ಲಿ ಮಸಾಜ್ ಪಾರ್ಲರ್‍ನಲ್ಲಿ ಕೊಲ್ಕತ್ತಾ ಮೂಲದ ಫರೀದಾ ಖಾನಂ(42) ಎಂಬ ಮಹಿಳೆಯ ಪರಿಚಯವಾಗಿತ್ತು. ವಿಚ್ಚೇದಿತೆಯಾಗಿದ್ದ ಫರೀದಾಗೆ ವಯಸ್ಸಿಗೆ ಬಂದ ಮಗಳಿದ್ದಳು. ವಿಚ್ಚೇದನದ ನಂತರ 2014ರಲ್ಲಿ ಫರೀದಾ ಬೆಂಗಳೂರಿಗೆ ಬಂದು ನೆಲೆಸಿದ್ದರು. ಫರೀದಾ ಜತೆಗಿನ ಗಿರೀಶನ ಪರಿಚಯ ಪ್ರೀತಿಗೆ ತಿರುಗಿತ್ತು. ಹೀಗಿರುವಾಗ ತನ್ನನ್ನು ಮದುವೆಯಾಗುವಂತೆ ಗಿರೀಶ್ ಒತ್ತಾಯಿಸುತ್ತಿದ್ದ. ಆದರೆ ಮದುವೆಯಾಗಲು ಆಕೆ ನಿರಾಕರಿಸುತ್ತಿದ್ದಳು ಎನ್ನಲಾಗಿದೆ.
ಮಾ.6ರಂದು ಕೊಲ್ಕತ್ತಾಗೆ ತೆರಳಿದ್ದ ಫರೀದಾ ಹಾಗೂ ಆಕೆಯ ಮಗಳು ಕೆಲವು ದಿನಗಳ ಕಾಲ ಅಲ್ಲಿಯೇ ಇದ್ದರು. ಮಾ.29ರಂದು ಗಿರೀಶ್‍ನ ಹುಟ್ಟುಹಬ್ಬ ಹಾಗೂ ಮಗಳಿಗೆ ಕಾಲೇಜಿನಲ್ಲಿ ಪ್ರವೇಶಾತಿ ಸಹ ಇದ್ದುದರಿಂದ ಹಿಂದಿನ ದಿನವೇ ಫರೀದಾ ಬೆಂಗಳೂರಿಗೆ ವಾಪಸಾಗಿದ್ದಳು. ಶುಕ್ರವಾರ ಹುಟ್ಟುಹಬ್ಬದ ಸಂಭ್ರಮಾಚರಣೆ ಮುಗಿಸಿ, ಇಬ್ಬರೂ ಜೆ.ಪಿ.ನಗರದ ಹೋಟೆಲ್‍ನಲ್ಲಿ ವಾಸವಿದ್ದರು.
ನಂತರ ಗಿರೀಶ್ ಮಾ.30ರಂದು ಫರೀದಾಳನ್ನು ಜಯನಗರದ ಶಾಲಿನಿ ಗ್ರೌಂಡ್‍ಗೆ ಕರೆತಂದಿದ್ದ. ಈ ವೇಳೆ ಮದುವೆ ಆಗೋಣ ಎಂದು ಕೇಳಿಕೊಂಡಿದ್ದ. ಅದಕ್ಕೆ ಒಪ್ಪದೇ ಇದ್ದಾಗ ಆಕೆಗೆ ಚಾಕುವಿನಿಂದ ಇರಿದು ಹತ್ಯೆಗೈದಿರುವುದಾಗಿ ಪೊಲೀಸರ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.