ತೆರಿಗೆ ಹಣ ಹಂಚಿಕೆಯಲ್ಲಿ ಕೇಂದ್ರದ ಅನ್ಯಾಯ ಖಂಡಿಸಿ ಸಿಪಿಐ ಪ್ರತಿಭಟನೆ

Update: 2024-02-12 16:53 GMT

ಬೆಂಗಳೂರು: ಜಿಎಸ್ಟಿ, ತೆರಿಗೆ ಹಣ, ಬರ ಪರಿಹಾರ ಸೇರಿದಂತೆ ವಿವಿಧ ಅನುದಾನಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡುವಲ್ಲಿ ಕೇಂದ್ರ ಸರಕಾರ ಎಸಗುತ್ತಿರುವ ತಾರತಮ್ಯ ನೀತಿಯನ್ನು ಖಂಡಿಸಿ ಹಾಗೂ ಸಂಸದರ ಹೊಣೆಗಾರಿಕೆಯನ್ನು ಪ್ರಶ್ನಿಸಿ ನಗರದ ಫ್ರೀಡಂಪಾರ್ಕ್‍ನಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ)ದ ಬೆಂಗಳೂರು ಜಿಲ್ಲಾ ಮಂಡಳಿಯ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾ ವೇಳೆಯಲ್ಲಿ ಮಾತನಾಡಿದ ಸಿಪಿಐ ಸಹ ಕಾರ್ಯದರ್ಶಿ ಡಿ.ಎ.ವಿಜಯ ಭಾಸ್ಕರ, ಸಂವಿಧಾನದ ಆಶಯದಂತೆ ಕೇಂದ್ರವು ದೇಶದ ಜನತೆಯ ಪರವಾಗಿ ಆಡಳಿತವನ್ನು ನಡೆಸಬೇಕಾಗಿದೆ. ರಾಜ್ಯಗಳ ಮೂಲಕ ವಸ್ತುಗಳು, ಆಸ್ತಿಗಳು, ವಾಹನಗಳು ಇತ್ಯಾದಿ ಮೇಲಿನ ತೆರಿಗೆ, ಸೆಸ್ ರೂಪದಲ್ಲಿ ಸಂಗ್ರಹಿಸುವ ಹಣವನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಹಂಚಿಕೆಯಾಗಬೇಕೆಂದು ಹಣಕಾಸು ಆಯೋಗವನ್ನು ರಚಿಸಲಾಗಿದೆ. ಅದರಂತೆ ತೆರಿಗೆ ಹಣವನ್ನು ನ್ಯಾಯ ಸಮ್ಮತವಾಗಿ ರಾಜ್ಯಗಳಿಗೆ ಹಂಚಿಕೆ ಮಾಡಿ ಅಗತ್ಯವಾದ ಅನುದಾನಗಳನ್ನು ಕಾಲಕಾಲಕ್ಕೆ ಬಿಡುಗಡೆಗೊಳಿಸಬೇಕಾಗಿರುವುದು ಕೇಂದ್ರ ಸರಕಾರದ ಹೊಣೆಗಾರಿಕೆಯಾಗಿದೆ ಎಂದರು.

ನಾಲ್ಕು ವರ್ಷಗಳಿಂದ ರಾಜ್ಯಗಳಿಗೆ ಲಭಿಸಬೇಕಾದ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರಕಾರ ಕರ್ನಾಟಕಕ್ಕೆ ಅನ್ಯಾಯ ಎಸಗಿದ್ದು ಸುಮಾರು 45 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳೇ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ರಾಜ್ಯದ ಬರ ಪರಿಹಾರದ ಅನುದಾನವನ್ನು ಸಹ ಬಿಡುಗಡೆಗೊಳಿಸದೇ ಇರುವುದು ರಾಜ್ಯಕ್ಕೆ ಮಾಡಿರುವ ಮಹಾ ಅನ್ಯಾಯವೇ ಆಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐ ಸಹ ಕಾರ್ಯದರ್ಶಿ ಬಿ.ಅಮ್ಜದ್ ಮಾತನಾಡಿ, ರಾಜ್ಯದ ಪಾಲಿನ ತೆರಿಗೆ ಹಣ ಸೇರಿದಂತೆ ನೆಲ ಜಲ ಭಾಷೆಯಂತಹ ರಾಜ್ಯದ ಅಸ್ಮಿತೆಯ ಪ್ರಶ್ನೆಗಳು ಎದುರಾದಾಗ ರಾಜ್ಯದ ಪರ ಧ್ವನಿಯಾಗದೆ ಸಂಸದರು ಮೌನ ತಾಳಿರುವುದು ಖಂಡನೀಯವಾಗಿದೆ. ರಾಜ್ಯದ ಸಂಸದರ ನಿರ್ಲಕ್ಷತನಕ್ಕೆ ಸದ್ಯದಲ್ಲೇ ಬರುತ್ತಿರುವ ಚುನಾವಣೆಯಲ್ಲಿ ಉತ್ತರ ಸಿಗುತ್ತದೆ ಎಂದು ತಿಳಿಸಿದರು. ಸಿಪಿಐ ಕಾರ್ಯದರ್ಶಿಗಳಾದ ಎಂ.ಸತ್ಯಾನಂದ, ಗುರವಯ್ಯ, ಜಯಮ್ಮ, ದಿವ್ಯಾ, ನಾರಾಯಣ ಸ್ವಾಮಿ, ಶಾಂತರಾಜ ಜೈನ್ ಸೇರಿ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News