ಸರಕಾರಿ ಆಸ್ಪತ್ರೆಗಳಲ್ಲಿ ‘ಉಚಿತ ಆರೋಗ್ಯ ಗ್ಯಾರಂಟಿ’ ಯೋಜನೆ ಜಾರಿಗೆ ನೈಜ ಹೋರಾಟಗಾರರ ವೇದಿಕೆ ಒತ್ತಾಯ

Update: 2024-05-16 13:54 GMT
ಸಾಂದರ್ಭಿಕ ಚಿತ್ರ (NDTV)

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗಿ ಒಂದು ವರ್ಷವಾಗುತ್ತಿದ್ದು, ರಾಜ್ಯದ ನಾಗರಿಕರಿಗೆ ಉಡುಗೊರೆಯಾಗಿ ಸರಕಾರಿ ಆಸ್ಪತ್ರೆಯಲ್ಲಿನ ಕ್ಯಾಶ್ ಕೌಂಟರ್ ಗಳನ್ನು ತೆರವುಗೊಳಿಸಿ, ಬಡವರಿಗೆ ಆಶಾಕಿರಣವಾಗಿ ಉಚಿತ ಆರೋಗ್ಯ ಗ್ಯಾರಂಟಿ ಯೋಚನೆಯನ್ನು ಜಾರಿಗೊಳಿಸಬೇಕು ಎಂದು ರಾಜ್ಯ ಸರಕಾರಕ್ಕೆ ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.

ಗುರುವಾರ ವೇದಿಕೆಯ ಸಂಚಾಲಕ ಎಚ್.ಎಂ.ವೆಂಕಟೇಶ್ ಪ್ರಕಟನೆ ಹೊರಡಿಸಿದ್ದು, ಎಲ್ಲ ಗ್ಯಾರಂಟಿ ಯೋಜನೆಗಳಿಗಿಂತಲೂ ಸರಕಾರಿ ಆಸ್ಪತ್ರೆಗಳಲ್ಲಿ ಕ್ಯಾಶ್‍ಲೆಸ್ ಸೌಲಭ್ಯ ಮುಖ್ಯವಾಗಿ ಬೇಕಾಗಿದೆ. ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ವಾಸಿಸುವ ಮತ್ತು ಕೆಳ ಮಧ್ಯಮ ವರ್ಗದ ಜನರು ಸರಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿರುವುದರಿಂದ ಆಸ್ಪತ್ರೆಗಳಲ್ಲಿ ಕ್ಯಾಶ್ ಲೆಸ್ ಯೋಜನೆ ಉಚಿತ ಆರೋಗ್ಯ ಗ್ಯಾರಂಟಿ ಯೋಜನೆ ಅವಶ್ಯಕವಾಗಿ ಬೇಕಾಗಿದೆ ಎಂದು ತಿಳಿಸಿದ್ದಾರೆ.

ಸರಕಾರಿ ಆಸ್ಪತ್ರೆಗಳಲ್ಲಿ ವಿವಿಧ ತಪಾಸಣೆಗಳಿಗೆ ಕ್ಯಾಶ್ ಕೌಂಟರ್ ನಲ್ಲಿ ಸಬ್ಸಿಡಿ ದರದಲ್ಲಿ ಹಣ ಕಟ್ಟಲೇ ಬೇಕಾಗಿದೆ. ಖಾಸಗಿ ಆಸ್ಪತ್ರೆಗಳಿಗಿಂತ ಸರಿಸುಮಾರು ಶೇಕಡ50ರಷ್ಟು ಕಡಿಮೆ ಹಣವನ್ನು ಸರಕಾರಿ ಆಸ್ಪತ್ರೆಗಳಲ್ಲಿ ಕಟ್ಟಲೇಬೇಕಾಗಿದೆ. ಇದರಿಂದ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವನ ನಡೆಸುವವರಿಗೆ ಇದು ಬಹಳ ದೊಡ್ಡ ಮೊತ್ತವಾಗಿದೆ ಎಂದು ಅವರು ತಿಳಿಸಿದರು.

ನಗರದ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳು ಬಡ ಕುಟುಂಬದವರು ಹಣ ಕಟ್ಟಲು ಸಾಧ್ಯವಾಗದೆ ತೊಂದರೆ ಪಡುತ್ತಿದ್ದಾರೆ. ಹೀಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಕ್ಯಾಶ್ ಕೌಂಟರ್ ಗಳನ್ನು ತೆರವುಗೊಳಿಸಿ ಬಡವರಿಗೆ ಕ್ಯಾಶ್ ಲೆಸ್ ಚಿಕಿತ್ಸೆಯನ್ನು ನೀಡಲು ಉಚಿತ ಆರೋಗ್ಯ ಗ್ಯಾರಂಟಿ ಘೋಷಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News