ಪ್ರಜ್ವಲ್ ಲೈಂಗಿಕ ಹಗರಣ | ಸಂತ್ರಸ್ತೆಯರ ರಕ್ಷಣೆ ನಮ್ಮ ಜವಾಬ್ದಾರಿ : ನಾಗಲಕ್ಷ್ಮಿ ಚೌಧರಿ

Update: 2024-05-16 17:22 GMT

ಪ್ರಜ್ವಲ್ ರೇವಣ್ಣ

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಸಂತ್ರಸ್ತೆಯರಿಗೆ ರಕ್ಷಣೆ ಹಾಗೂ ರಾಜ್ಯ ಸರಕಾರದಿಂದ ಸೌಲಭ್ಯಗಳನ್ನು ಕೊಡಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

ಗುರುವಾರ ನಗರದ ಸಿಎಸ್‍ಐ ಕಂಪೌಂಡ್‍ನಲ್ಲಿರುವ ಸೌಹಾರ್ದ ಸಭಾಂಗಣದಲ್ಲಿ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಏರ್ಪಡಿಸಿದ್ದ ‘ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಕುರಿತು ಸಮಾಲೋಚನಾ ಸಭೆ’ಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಹಾಸನದಲ್ಲಿ ಸಾಕ್ಷಿ ನಾಶ ಮಾಡುವ ಕೆಲಸ ನಡೆಯುತ್ತಿದ್ದು, ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಮಹಿಳೆಯರನ್ನು ಬಳಸಿಕೊಳ್ಳಲಾಗಿದ್ದು, ಸಂತ್ರಸ್ತ ಮಹಿಳೆಯರ ಪರವಾಗಿ ನಾವು ನಿಲ್ಲಬೇಕಿದೆ ಎಂದು ಅಭಿಪ್ರಾಯಪಟ್ಟರು.

‘ವಿಕ್ಟಿಮ್ ಪ್ರೊಟೆಕ್ಷನ್ ಸ್ಕೀಂ’ ಮೂಲಕ ಸಂತ್ರಸ್ತೆಯರಿಗೆ ಪರಿಹಾರ ನೀಡುವ ಚಿಂತನೆ ಮಾಡಲಾಗಿದೆ. ಪೊಲೀಸರ ನಿರ್ಲಕ್ಷೆದಿಂದ ಹಾಸನದಲ್ಲಿ ಅತ್ಯಾಚಾರ ಮತ್ತು ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆಯಾಗಿದೆ. ಮಹಿಳೆಯರು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಬಂದಾಗ ಸ್ಥಳೀಯ ಪೊಲೀಸರು ನಡೆದುಕೊಳ್ಳಬೇಕು ಎಂದು ಹೇಳಿದರು.

ಹಿರಿಯ ವಕೀಲ ಬಿ.ಟಿ.ವೆಂಕಟೇಶ್ ಮಾತನಾಡಿ, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣದಲ್ಲಿ ಮಹಿಳೆಯರು ದೂರು ದಾಖಲಿಸಲು ಬರುತ್ತಿಲ್ಲ. ಯಾಕೆಂದರೆ ಅವರಲ್ಲಿರುವ ಭಯ ಮತ್ತು ಆರೋಪಿಯಲ್ಲಿರುವ ವಿಡಿಯೋಗಳು, ಅದಕ್ಕಾಗಿ ಸಂತ್ರಸ್ತ ಮಹಿಳೆಯರಿಗೆ ಸಾಮಾಜಿಕ ಜಾಗೃತಿ ಮೂಡಿಸಿ ಅವರ ಜತೆ ನಿಲ್ಲುವ ಕೆಲಸ ಮಾಡಬೇಕು. ಹಾಗೂ ಮಹಿಳೆಯರನ್ನು ಯಾವ ರೀತಿ ರಕ್ಷಣೆ ಮಾಡಬೇಕು ಎಂಬುದನ್ನು ಸರಕಾರ ಚಿಂತಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮಾತನಾಡಿ, ಈ ಪ್ರಕರಣವನ್ನು ಊಹಾಪೋಹ, ಅಂತೆ ಕಂತೆಗಳ ಆಧಾರದಲ್ಲಿ ನಡೆಯಬಾರದು. ವಾಸ್ತವಾಂಶದ ಆಧಾರದಲ್ಲಿ ನಡೆಯಬೇಕು. ಒಂದು ವರ್ಷದ ಹಿಂದೆಯೇ ಪೆನ್‌ ಡ್ರೈವ್ ಸುಳಿವು ಸಿಕ್ಕಿದ್ದರೂ, ಸ್ಥಳೀಯ ಪೊಲೀಸರು ಮತ್ತು ಇಂಟಲಿಜೆನ್ಸ್ ತನಿಖೆ ಯಾಕೆ ಮಾಡಲಿಲ್ಲ. ತಕ್ಷಣ ತನಿಖೆ ನಡೆಸಿದ್ದರೆ ಇಷ್ಟೊತ್ತಿಗೆ ಆರೋಪಿ ಜೈಲಿನಲ್ಲಿರುತ್ತಿದ್ದ ಎಂದು ಹೇಳಿದರು.

ಸಭೆಯಲ್ಲಿ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ವಿಜಯಾ, ಹಿರಿಯ ವಕೀಲ ಸಿ.ಎಚ್. ಹನುಮಂತರಾಯ, ದಸಂಸ ಮುಖಂಡ ಮಾವಳ್ಳಿ ಶಂಕರ್, ವೈದ್ಯೆ ಡಾ.ವಸುಂಧರಾ ಭೂಪತಿ, ಲೇಖಕಿ ಡಾ.ಕೆ.ಶರೀಫಾ, ಇಂದಿರಾ ಕೃಷ್ಣಪ್ಪ, ಪತ್ರಕರ್ತೆ ಆರ್.ಪೂರ್ಣಿಮಾ, ವಿನಯ್ ಶ್ರಿನಿವಾಸ್, ರೈತ ಮುಖಂಡ ಬಡಗಲಪುರ ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಮೇ 30ಕ್ಕೆ ಹಾಸನ ಚಲೋ: ‘ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಿಂದ ಹಾಸನದಲ್ಲಿ ಮಹಿಳೆಯರು ತಲೆಯೆತ್ತದ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ರಾಜಕೀಯಕ್ಕಾಗಿ ಮಹಿಳೆಯರನ್ನು ಬಳಸಿಕೊಂಡ ಗಂಡಸುತನದ ಧಿಮಾಕನ್ನು ಪ್ರಶ್ನೆ ಮಾಡುತ್ತಾ, ಪ್ರಕರಣದ ಸಂತ್ರಸ್ತ ಮಹಿಳೆಯರಿಗೆ ನೈತಿಕ ಸ್ಥೈರ್ಯ ನೀಡುವ ನಿಟ್ಟಿನಲ್ಲಿ ಮೇ.30ಕ್ಕೆ ಹಾಸನ ಚಲೋ ಹಮ್ಮಿಕೊಳ್ಳಲಾಗಿದೆ. ಅಂದು ಸೂಳೆ ಸಂಕವ್ವ ದೇವರಿಗೆ ನಿರ್ಲಜ್ಜನೆಂದು ಕರೆದಿದ್ದಳು, ತಪ್ಪು ಮಾಡಿದ ಪ್ರಜ್ವಲ್ ನಿರ್ಲಜ್ಜನಾಗಿದ್ದು, ತಪ್ಪು ಮಾಡದ ಮಹಿಳೆಯರು ಯಾಕೆ ತಲೆ ತಗ್ಗಿಸಬೇಕು’ ಎಂದು ಹೋರಾಟಗಾರ್ತಿ ಮೀನಾಕ್ಷಿ ಬಾಳಿ ತಿಳಿಸಿದರು.

ಸಭೆಯ ಪ್ರಮುಖಾಂಶಗಳು:

•ವಿಶೇಷ ನ್ಯಾಯಾಲಯ ಸ್ಥಾಪನೆ

•ಜಾಗೃತಿ ಕಾರ್ಯಕ್ರಮ

•ಗೌಪ್ಯತೆ ಕಾಪಾಡುವುದು

•ನೀತಿ ರಚನೆ

•ನ್ಯಾಯಾಂಗ ತನಿಖೆ

•ವಾಸ್ತವಾಂಶ ಕ್ರೂಢಿಕರಣ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News