ಸಂಶೋಧನಾ ವರದಿಯಿಲ್ಲದೆ ಇಂಗ್ಲಿಷ್ ಶಾಲೆಗಳ ಪ್ರಾರಂಭಿಸುವ ಸರಕಾರದ ತೀರ್ಮಾನಕ್ಕೆ ಶಿಕ್ಷಣ ತಜ್ಞರು, ಸಾಹಿತಿಗಳ ಖಂಡನೆ

Update: 2024-05-29 15:27 GMT

PC: Shutterstock

ಬೆಂಗಳೂರು: ಸಂಶೋಧನಾ ವರದಿಯಿಲ್ಲದೆ ಸುಮಾರು ಮೂರು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ತೀರ್ಮಾನ ಅವೈಜ್ಞಾನಿಕವಾಗಿದ್ದು, ತಕ್ಷಣವೇ ಆ ನಿರ್ಧಾರವನ್ನು ಹಿಂಪಡೆಬೇಕು ಎಂದು ಶಿಕ್ಷಣ ತಜ್ಞರು, ಸಾಹಿತಿಗಳು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಬುಧವಾರ ನಗರದ ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ., ಕಾಂಗ್ರೆಸ್ ಸರಕಾರದ ಈ ತೀರ್ಮಾನ ನ್ಯಾಯಸಮ್ಮತವಲ್ಲ. ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸುವುದನ್ನು ಬಿಟ್ಟು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಕ್ಕೆ ಸರಕಾರ ಮುಂದಾಗಿರುವುದು ಖಂಡನಾರ್ಹ ಎಂದರು.

ಈ ಹಿಂದೆ ಇದೇ ಕಾಂಗ್ರೆಸ್ ಸರಕಾರ ಶಿಕ್ಷಣ ಹಕ್ಕು ಕಾಯಿದೆಯಡಿ ಕನಿಷ್ಠ 8ನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕು. 2015ರ ಕನ್ನಡ ಕಲಿಕಾ ಅಧಿನಿಯಮ ಪ್ರಕಾರ, ಕನ್ನಡವನ್ನು ಮೊದಲ ಭಾಷೆಯಾಗಿ ಓದಬೇಕು ಎಂಬ ಪ್ರಸ್ತಾಪ ಮಾಡಿದೆ. ಇವೆಲ್ಲದರ ಬಗ್ಗೆ ಆಲೋಚಿಸದೆ, ಈಗ ಏಕಾಏಕಿ ಮೂರು ಸಾವಿರ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಹೊರಟಿದ್ದು ಅವೈಜ್ಞಾನಿಕವಾಗಿದೆ. ಕನ್ನಡ, ಕನ್ನಡಿಗರಿಗೆ, ಕರ್ನಾಟಕಕ್ಕೆ ಮಾರಕವಾಗಿರುವ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯ ಸರಕಾರ ಈಗಾಗಲೇ ಶಿಕ್ಷಣ ನೀತಿ ರೂಪಿಸಲು ಒಂದು ಆಯೋಗ ರಚಿಸಿದೆ. ಆಯೋಗ ಶಿಫಾರಸು ಮಾಡುವ ಅಂಶಗಳನ್ನು ಆಧರಿಸಿ ಸರಕಾರ ತೀರ್ಮಾನ ತೆಗೆದುಕೊಳ್ಳಬೇಕು. ಆದರೆ, ಅದಕ್ಕೂ ಮೊದಲೇ ಸ್ವಯಂ ಘೋಷಿತ ನೀತಿಗಳನ್ನು ರೂಪಿಸಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಕನ್ನಡ ಕಲಿಕಾ ಅಧಿನಿಯಮದ ಪರಿಣಾಮಕಾರಿ ಜಾರಿ, ಶಿಕ್ಷಣ ಹಕ್ಕಿಗೆ ಸಂಬಂಧಿಸಿದಂತೆ 2015ರಲ್ಲಿ ರಾಷ್ಟ್ರಪತಿಗೆ ಸಲ್ಲಿಕೆ ಮಾಡಿರುವ ಮಸೂದೆ ಒಪ್ಪಿಗೆ ಪಡೆಯಲು ರಾಜ್ಯ ಸರಕಾರ ಎಲ್ಲ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರಂಜನಾರಾಧ್ಯ ಮನವಿ ಮಾಡಿದರು.

ಚಿಂತಕ ಪ್ರೊ.ಜಿ.ರಾಮಕೃಷ್ಣ ಮಾತನಾಡಿ, ಎಲ್ಲ ಸರಕಾರಗಳು ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಇರುವ ಸಂಶೋಧನೆ, ಒಮ್ಮತದ ನಿರ್ಣಯಗಳನ್ನು ಆಧರಿಸಿ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ, ಮಕ್ಕಳ ಕಲಿಕಾ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರಿದೆ ಎಂದರು.

ಸರಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅದನ್ನು ತಡೆಯಲು ಏನು ಮಾಡಬೇಕು ಎಂಬುದರ ಬಗ್ಗೆ ಚಿಂತಿಸಬೇಕು. ಮೂಲಸೌಕರ್ಯ ಹೆಚ್ಚಿಸಿ ಹೊಸದಿಲ್ಲಿ ಮಾದರಿಯಲ್ಲಿ ಸರಕಾರವು ರಾಜ್ಯದ ಶಾಲೆಗಳನ್ನು ಅಭಿವೃದ್ಧಿ ಪಡಿಸುವತ್ತ ಗಮನ ಹೆಜ್ಜೆಯಿಡಬೇಕು ಎಂದು  ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಲೇಖಕ ಡಾ.ವಸುಂಧರಾ ಭೂಪತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ಲೇಖಕ ರಾ.ನಂ.ಚಂದ್ರಶೇಖರ ಸೇರಿದಂತೆ ಹಲವು ಲೇಖಕರು ಉಪಸ್ಥಿತರಿದ್ದರು.

ಸಿಎಂ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆಯಾಗಲಿ..!

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಿಕ್ಷಣ ನೀತಿಗೆ ಸಂಬಂಧಿಸಿದ ವಿಷಯದಲ್ಲಿ ಸ್ಪಷ್ಟತೆ ಇದ್ದು, ಅವರು ತಕ್ಷಣವೇ ಭಾಷಾ ಮತ್ತು ಶಿಕ್ಷಣ ತಜ್ಞರು, ವಿಷಯ ಪರಿಣಿತರೊಂದಿಗೆ ಮಾತುಕತೆ ನಡೆಸಬೇಕು. ಜತೆಗೆ, ತಮ್ಮ ನೇತೃತ್ವದಲ್ಲಿ ಒಂದು ತಜ್ಞರ ಸಮಿತಿ ರಚಿಸಿ, ಎಲ್ಲ ಶಾಲೆಗಳಿಗೆ ಸಂಬಂಧಿಸಿದ ಸಾರ್ವತ್ರಿಕ ಶಿಕ್ಷಣ ನೀತಿ ಮತ್ತು ಸಮಗ್ರ ಭಾಷಾ ನೀತಿ ರೂಪಿಸಬೇಕು ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News