‘ಸಂವಿಧಾನದ ಹತ್ಯೆ ಮಾಡಿದವರು ಯಾರು’ ಎಂದು ಯುವಜನರಿಗೆ ತಿಳಿಸಬೇಕಿದೆ : ಕೇಂದ್ರ ಸಚಿವ ನಿತಿನ್ ಗಡ್ಕರಿ

Update: 2024-07-04 16:38 GMT

ಬೆಂಗಳೂರು: ಇಂದಿನ ಯುವಜನರಿಗೆ ತುರ್ತು ಪರಿಸ್ಥಿತಿಯ ಕುರಿತು ಮಾಹಿತಿ ಇಲ್ಲ. ಇತಿಹಾಸ ಮರೆಯದೆ ಪ್ರಜಾಪ್ರಭುತ್ವವನ್ನು ದೃಢಪಡಿಸಬೇಕು. ಸಂವಿಧಾನದ ಹತ್ಯೆ ಮಾಡಿದವರು ಯಾರು ಎಂದು ಯುನಜನರಿಗೆ ತಿಳಿಸಬೇಕಿದೆ ಎಂದು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ಗುರುವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿಯ ಸಮಾರೋಪ ಭಾಷಣ ಮಾಡಿದ ಅವರು, ಸಂವಿಧಾನ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಿಜೆಪಿ ಸದಾ ಬದ್ಧ ಎಂದು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ಬಿಜೆಪಿ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಚುನಾವಣೆ ವೇಳೆ ಸುಳ್ಳು ಪ್ರಚಾರ ಮಾಡಲಾಗಿತ್ತು. ಸ್ವಾರ್ಥಕ್ಕಾಗಿ ಸಂವಿಧಾನವನ್ನು ಬದಲಿಸಿದ, ಸಂವಿಧಾನದ ಹತ್ಯೆ ಮಾಡಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷವು ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿತ್ತು ಎಂದು ನಿತಿನ್ ಗಡ್ಕರಿ ಟೀಕಿಸಿದರು.

1975ರಲ್ಲಿ ತುರ್ತು ಪರಿಸ್ಥಿತಿಯ ವೇಳೆ ನಮ್ಮ ನೇತಾರರು, ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದು ಪ್ರಜಾಸತ್ತೆ ಮತ್ತು ಸಂವಿಧಾನದ ಹತ್ಯೆ. ಬೆಂಗಳೂರಿನ ಜೈಲಿನಲ್ಲಿ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಇನ್ನಿತರರನ್ನು ಇರಿಸಲಾಗಿತ್ತು. ತುರ್ತು ಪರಿಸ್ಥಿತಿಯ ವಿರುದ್ಧ ಭಾರತೀಯ ಜನಸಂಘ ಹೋರಾಡಿ ಪ್ರಜಾಸತ್ತೆಯನ್ನು ಉಳಿಸುವ ಕೆಲಸ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

ನಮ್ಮದು ಕುಟುಂಬ ಆಧಾರಿತ ಪಕ್ಷವಲ್ಲ. ನೆಹರೂ ಅವರಿಂದ ಆರಂಭಿಸಿ ರಾಹುಲ್ ಗಾಂಧಿವರೆಗೆ ಕಾಂಗ್ರೆಸ್ ಪಕ್ಷವು ಕುಟುಂಬ ಆಧರಿತ ಪಕ್ಷವಾಗಿ ಕೆಲಸ ಮಾಡಿದೆ. ಬಡತನ ನಿರ್ಮೂಲನೆ(ಗರೀಬಿ ಹಠಾವೊ) ಎಂದು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿತ್ತು. ಆದರೆ, ಆ ಪಕ್ಷದ ಮುಖಂಡರು ಹಾಗೂ ಚೇಲಾಗಳ ಬಡತನ ಮಾತ್ರ ದೂರವಾಗಿದೆ ಎಂದು ನಿತಿನ್ ಗಡ್ಕರಿ ವ್ಯಂಗ್ಯವಾಡಿದರು.

ಜಾತಿವಾದದ ಪಕ್ಷ ನಮ್ಮದಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಚಿಂತನೆ ನಮ್ಮದು. ಜನರ ನಡುವೆ ತಾರತಮ್ಯ ಮಾಡಿದ ಪಕ್ಷ ನಮ್ಮದಲ್ಲ. ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರಗಳನ್ನು ನಾವು ಬಲಪಡಿಸಬೇಕಿದೆ. ಸ್ವದೇಶಿ, ಸ್ವಾವಲಂಬನೆ ಮೂಲಕ ಅಭಿವೃದ್ಧಿ ಕಡೆ ನಾವು ಗಮನ ಕೊಡುತ್ತಿದ್ದೇವೆ. ಸಮಸ್ಯೆಗಳನ್ನು ಸವಾಲನ್ನಾಗಿ ಪರಿವರ್ತನೆ ಮಾಡಿಕೊಂಡು ಮುನ್ನಡೆಯೋಣ ಎಂದು ಅವರು ಮನವಿ ಮಾಡಿದರು.

ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ, ಇಂಡಿ ಒಕ್ಕೂಟ ಸತತ ಮೂರನೇ ಬಾರಿ ಸೋಲನ್ನು ಅನುಭವಿಸಿ ಮತ್ತೆ ವಿಪಕ್ಷ ಸ್ಥಾನದಲ್ಲಿವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಒಂದೇ ಒಂದು ವರ್ಷದಲ್ಲಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಲೀಡ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಯಾವಾಗ ವಿಧಾನಸಭಾ ಚುನಾವಣೆ ನಡೆದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಹಿಂದಿನಂತೆ ನಗರ ಸೀಮಿತ, ಮುಂದುವರೆದ ಜನಾಂಗದ ಪಕ್ಷವಾಗಿ ಉಳಿದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಸ್ವೀಕರಿಸಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಿ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಜು.11ರಂದು ರಾಜ್ಯ ಪದಾಧಿಕಾರಿಗಳ ಸಭೆ: ಜು.11ರಂದು ರಾಜ್ಯ ಪದಾಧಿಕಾರಿಗಳ ಸಭೆ ನಡೆಸಲಾಗುವುದು. ಪಕ್ಷ ಸಂಘಟನೆ, ದುಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟದ ಕುರಿತು ಚರ್ಚೆ ಮಾಡುತ್ತೇವೆ. ಜು.20ರೊಳಗೆ ಜಿಲ್ಲಾ ಕಾರ್ಯಕಾರಿಣಿ ಸಭೆಗಳನ್ನು ಮುಗಿಸುವಂತೆ ಪದಾಧಿಕಾರಿಗಳಿಗೆ ವಿಜಯೇಂದ್ರ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News