ಜು.8ರಿಂದ ವಿ.ಸಿ.ನಾಲೆಗೆ ನೀರು ಹರಿಸಲು ತೀರ್ಮಾನ : ಸಚಿವ ಚಲುವರಾಯಸ್ವಾಮಿ

Update: 2024-07-06 16:33 GMT

ಬೆಂಗಳೂರು : ಹತ್ತು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಕೆ.ಆರ್.ಎಸ್ ಅಣೆಕಟ್ಟು 100 ಅಡಿ ತುಂಬಿದೆ, ಮಂಡ್ಯ ಜಿಲ್ಲೆಯ ಶಾಸಕರ ಒತ್ತಾಯದ ಮೇರೆಗೆ ಜು.8ರ ಸಂಜೆಯಿಂದ ಹದಿನೈದು ದಿನಗಳ ಕಾಲ ವಿ.ಸಿ.ನಾಲೆಗೆ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಶನಿವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಪ್ರತಿವರ್ಷ ಕೆಆರ್ ಎಸ್ ಅಣೆಕಟ್ಟಿನಿಂದ ಜುಲೈ ಎರಡನೆ ವಾರದಿಂದ ವಿ.ಸಿ.ನಾಲೆಗೆ ನೀರು ಹರಿಸಲಾಗುತ್ತಿತ್ತು. ಆದರೆ, ಈ ಬಾರಿ ಮಾರ್ಚ್‍ನಲ್ಲಿ ನಾಲೆಗೆ ನೀರು ಹರಿಸದ ಹಿನ್ನಲೆಯಲ್ಲಿ ಜು.8ರ ಸಂಜೆಯಿಂದ ಮುಂದಿನ 15 ದಿನಗಳ ಕಾಲ ವಿ.ಸಿ.ನಾಲೆಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.

ಇದು ಕೇವಲ ಕೆರೆ ಕಟ್ಟೆ ತುಂಬಿಸಲು ಹಾಗೂ ಜಾನುವಾರುಗಳ ಹಿತದೃಷ್ಟಿಯಿಂದ ನಾಲೆಗೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಮುಂದಿನ 15 ದಿನಗಳ ನಂತರ ಮುಂಗಾರು ಮಳೆಯ ಪರಿಸ್ಥಿತಿ ಹಾಗೂ ಕೆಆರ್ ಎಸ್ ಅಣೆಕಟ್ಟಿನ ಒಳಹರಿವು ಗಮನಿಸಿಕೊಂಡು ರೈತರ ಬೆಳೆಗಳಿಗೂ ನೀರು ಹರಿಸಲು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ವಿ.ಸಿ.ನಾಲೆಯ 36 ಕಿಮೀ ಕಾಮಗಾರಿ ಈಗಾಗಲೇ ಮುಕ್ತಾಯವಾಗಿದ್ದು, ಬಾಕಿ 16 ಕಿ.ಮೀ. ಕಾಮಗಾರಿ ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸಿದ ನಂತರ ಮುಕ್ತಾಯಗೊಳಿಸಲಾಗುವುದು. ಟ್ರಯಲ್ ಬ್ಲಾಸ್ಟ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕೋರ್ಟ್ ಅಡ್ವೋಕೆಟ್ ಜನರಲ್ ಜೊತೆ ಚರ್ಚೆ ಮಾಡಿ ಜು.15ರೊಳಗೆ ತೀರ್ಮಾನ ಕೈಗೊಳ್ಳಲಾಗುವುದು. ಇಂದು ಮಂಡ್ಯದಲ್ಲಿ ಟ್ರಯಲ್ ಬ್ಲಾಸ್ಟ್ ಸಾಧಕ ಬಾದಕ ಬಗ್ಗೆ ರೈತರ ಜೊತೆ ಚರ್ಚೆ ನಡೆಸಲಾಗಿದೆ ಚಲುವರಾಯಸ್ವಾಮಿ ಹೇಳಿದರು.

ಸಭೆಯಲ್ಲಿ ಮಂಡ್ಯ ಜಿಲ್ಲೆಯ ಶಾಸಕರಾದ ನರೇಂದ್ರ ಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಉದಯ್ ಗೌಡ, ರವಿಕುಮಾರ್ ಗಣಿಗ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಮಂಜೇಗೌಡ, ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News