‘ಭಾರತ್ ಬ್ರ್ಯಾಂಡ್ ಅಕ್ಕಿ’ ಮಾರಾಟ ಸ್ಥಗಿತ ವಿರೋಧಿಸಿ ಪ್ರತಿಭಟನೆ

Update: 2024-07-06 16:50 GMT

ಬೆಂಗಳೂರು : ಕೇಂದ್ರ ಸರಕಾರದ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಎದುರು ಅಕ್ಕಿ ಮಾರಾಟ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಲೋಕಸಭಾ ಚುನಾವಣೆಯಲ್ಲಿ ಮತ ಪಡೆಯಲು ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರ ಭಾರತ್ ಅಕ್ಕಿ ಮಾರಾಟ ಯೋಜನೆಯನ್ನು ಜಾರಿಗೆ ತಂದು ಈಗ ಆ ಯೋಜನೆಯನ್ನು ಸ್ಥಗಿತಗೊಳಿಸಿದ್ದು, ಇದು ಕೇಂದ್ರ ಸರಕಾರ ಜನರಿಗೆ ಮಾಡಿದ ದ್ರೋಹ. ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದು ಕೋಟ್ಯಾಂತರ ಫಲಾನುಭವಿಗಳಿಗೆ ನೆರವು ನೀಡಿದೆ ಎಂದರು.

ಕಾಂಗ್ರೆಸ್ ಸರಕಾರ ನುಡಿದಂತೆ ನಡೆದು ಎಲ್ಲ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಬಿಜೆಪಿ ಸರಕಾರ ಕೇವಲ ಒಂದು ಯೋಜನೆಯನ್ನು ಜಾರಿಗೆ ತಂದು, ನಾಲ್ಕು ತಿಂಗಳಲ್ಲೇ ರದ್ದುಗೊಳಿಸಿರುವುದು ಮೋದಿಯ ದುರಾಡಳಿತ ಹಾಗೂ ಸುಳ್ಳು ಆಶ್ವಾಸನೆಗೆ ಸಾಕ್ಷಿ. ಬಿಜೆಪಿ ನಾಯಕರು ಕಾಂಗ್ರೆಸ್ ಸರಕಾರದ ಜನಪ್ರಿಯತೆಯನ್ನು ಸಹಿಸದೆ ಸುಳ್ಳು ಆರೋಪಗಳನ್ನು ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಬಿಜೆಪಿಯ ಭೂಗಳ್ಳರು ಸರಕಾರಿ ಜಮೀನನ್ನು ನುಂಗಿ ಆಧಾರ ರಹಿತ ಆರೋಪ ಮಾಡುತ್ತಿರುವುದು ಅಪಹಾಸ್ಯವಾಗಿದೆ ಎಂದು ಟೀಕಿಸಿದರು.

ದೇಶದ ಬಡವರನ್ನು ವಂಚಿಸುತ್ತಿರುವ ನರೇಂದ್ರ ಮೋದಿ ಹಾಗೂ ಭ್ರಷ್ಟಾಚಾರದಲ್ಲಿ ಸಿಲುಕಿರುವ ಬಿಜೆಪಿ ನಾಯಕರು ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಇಂತಹ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಸೂಕ್ತ ಉತ್ತರವನ್ನು ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ಜನತೆ ನೀಡುತ್ತಾರೆಂಬುದನ್ನು ಬಿಜೆಪಿ ನಾಯಕರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಮುಖಂಡರಾದ ಜಿ.ಪ್ರಕಾಶ್, ಪುಟ್ಟರಾಜು ಚಂದ್ರಶೇಖರ್, ಟಿ.ಮಲ್ಲೇಶ್, ರಂಜಿತ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News