ಹೊಸ ಕಾನೂನುಗಳ ಬಗ್ಗೆ ಮಾಹಿತಿ ನೀಡುವ ‘ಸಂಚಯ’ ಮೊಬೈಲ್ ಆ್ಯಪ್ ಬಿಡುಗಡೆ

Update: 2024-07-06 16:40 GMT

ಬೆಂಗಳೂರು : ಜುಲೈ 1ರಿಂದ ದೇಶದಲ್ಲಿ ಅನುಷ್ಠಾನಗೊಂಡಿರುವ ಬಿಎನ್‍ಎಸ್, ಬಿಎನ್‍ಎಸ್‍ಎಸ್ ಹಾಗೂ ಸೇರಿದಂತೆ ಮೂರು ಹೊಸ ಕಾನೂನುಗಳ ಬಗ್ಗೆ ಅರಿಯಲು ಹಾಗೂ ಸಮಗ್ರ ಮಾಹಿತಿ ನೀಡಲು ರಾಜ್ಯ ಪೊಲೀಸ್ ಇಲಾಖೆ ಸಿದ್ಧಪಡಿಸಿದ ‘ಸಂಚಯ' ಎಂಬ ಹೆಸರಿನ ಮೊಬೈಲ್ ಆ್ಯಪ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ದಾರೆ.

ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ಹೊಸ ಆ್ಯಪ್, ಮೂರು ಹೊಸ ಕಾನೂನುಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲಿದೆ. ನ್ಯಾಯಾಂಗದ ಅಭಿಯೋಜಕರು, ವಕೀಲರು, ಪೊಲೀಸರು ಹಾಗೂ ವಿದ್ಯಾರ್ಥಿಗಳು ಒಳಗೊಂಡಂತೆ ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಲಿದೆ. ಕ್ರಿಮಿನಲ್ ಕಾನೂನುಗಳ ಮಾರ್ಪಾಡಿನ ಬಗ್ಗೆ ಮಾಹಿತಿ ನೀಡುವ ಮೂಲಕ ಅರಿವನ್ನು ಹೆಚ್ಚಿಸಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾನೂನು ಸಂಬಂಧಿತ ಪಾಲುದಾರರಾದ ನ್ಯಾಯಾಂಗ ಅಭಿಯೋಜಕರು, ವಕೀಲರು, ಕಾನೂನು ವಿದ್ಯಾರ್ಥಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಈ ಆ್ಯಪ್ ನೆರವಾಗಲಿದೆ. ಇತ್ತೀಚಿನ ಕ್ರಿಮಿನಲ್ ಕಾನೂನುಗಳ ಮಾರ್ಪಾಡಿನ ಬಗ್ಗೆ ಸಿದ್ಧ ಮಾರ್ಗದರ್ಶಿ ಇದಾಗಿದ್ದು, ಆಫ್‍ಲೈನ್ ಮತ್ತು ಆನ್‍ಲೈನ್ ಎರಡೂ ವಿಧದಲ್ಲಿ ಬಳಕೆ ಮಾಡಬಹುದಾಗಿದೆ ಎಂದರು.

ಕಾನೂನುಗಳ ಮಾರ್ಪಾಡಿನ ಬಗ್ಗೆ ಹಳೆಯ ಹಾಗೂ ಹೊಸ ಕಾನೂನುಗಳ ತುಲನೆ ಮಾಡಬಹುದಾಗಿದೆ. ಕನ್ನಡ ಕೈಪಿಡಿಯನ್ನು ಆ್ಯಪ್‍ನಲ್ಲಿ ಅಳವಡಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಮಾವೇಶದಲ್ಲಿ ವಿಧಿವಿಜ್ಞಾನ ಇಲಾಖೆಯಿಂದ ಸೀನ್ ಆಫ್ ಕ್ರೈಂ ಕೈಪಿಡಿ, ಹೊಯ್ಸಳ ವಾಹನಗಳ ರಿಯಲ್ ಟೈಮ್ ಟ್ರಾಕಿಂಗ್ ಪ್ರಾತ್ಯಕ್ಷಿಕೆ, ಸೇಫ್ ಕನೆಕ್ಟ್ ತಂತ್ರಾಂಶ ಬಿಡುಗಡೆ, ಆಡಿಯೋ-ವಿಡಿಯೋ ಸಂಪರ್ಕ ಮಾಡುವ ಟೆಕ್ನಾಲಜಿ, ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ ತನಿಖಾ ಕೈಪಿಡಿ, ಆನ್‍ಲೈನ್ ವಂಚನೆ ಪ್ರಕರಣಗಳ ತನಿಖೆ ಮಾಡುವ ಕೈಪಿಡಿ ಹಾಗೂ ತೊಂದರೆಯಲ್ಲಿರುವ ವ್ಯಕ್ತಿ ಕಮಾಂಡ್ ಸೆಂಟರ್ ಸಿಬ್ಬಂದಿ ಯೊಂದಿಗೆ ಸಂಪರ್ಕಿಸುವ ತಂತ್ರಜ್ಞಾನವನ್ನು ಬಿಡುಗಡೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News