ದ್ವೇಷ, ವೈರತ್ವವವನ್ನೇ ತುಂಬಿಕೊಂಡಿರುವ ಬಿಜೆಪಿ, ಆರೆಸ್ಸೆಸ್ ಎಂದೂ ವಿವೇಕಾನಂದರ ಪಥದಲ್ಲಿ ಹೆಜ್ಜೆ ಇರಿಸಿಲ್ಲ : ಎಎಪಿ

Update: 2024-07-04 16:43 GMT

ಬೆಂಗಳೂರು : ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆಯ ಅಂಗವಾಗಿ ಇರಿಸಲಾಗಿದ್ದ ಫೋಟೊವನ್ನು ಯಾಕೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರ್ ವಾಲ್, ಬಿಜೆಪಿ ಪಾಲಿಗೆ ವಿವೇಕಾನಂದರು ಬಳಸಿ ಬಿಸಾಡಲ್ಪಟ್ಟವರು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆರೋಪಿಸಿದರು.

ಗುರುವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆ ವೇದಿಕೆಯಲ್ಲಿ, ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ ವಾಲ್ ಅಸಹನೆಯಿಂದ ಸ್ವಾಮಿ ವಿವೇಕಾನಂದರ ಫೋಟೊ ಯಾಕೆ ಇಟ್ಟಿದ್ದೀರಿ? ಎಂದು ಪ್ರಶ್ನಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಹಾಗೂ ಸಂಘ ಪರಿವಾರ ಭಾರತದಲ್ಲಿ ಬಲವಾಗಿ ಬೇರೂರಲು ಸ್ವಾಮಿ ವಿವೇಕಾನಂದರನ್ನು ದುರ್ಬಳಕೆ ಮಾಡಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಕಳೆದ 10 ವರ್ಷಗಳಿಂದ ಅಧಿಕಾರ ಸಾಧಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿಗೆ ಸ್ವಾಮಿ ವಿವೇಕಾನಂದರ ಅಗತ್ಯವೂ ಇಲ್ಲ. ಭಾರತದ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಪಸರಿಸಿದ ಸ್ವಾಮಿ ವಿವೇಕಾನಂದರು ಹಾಕಿಕೊಟ್ಟಿರುವ ಧರ್ಮ ಮಾರ್ಗದಲ್ಲಿ ಎಂದೂ ಹೆಜ್ಜೆ ಇರಿಸದ ಬಿಜೆಪಿ, ಆರೆಸ್ಸೆಸ್‍ನವರು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡರು.

ಬಿಜೆಪಿ ಬೆಂಬಲಿಸುತ್ತಿರುವ ಹೆಚ್ಚಿನ ಯುವಕರು ಸ್ವಾಮಿ ವಿವೇಕಾನಂದರ ಕಾರಣಕ್ಕಾಗಿ ಬೆಂಬಲಿಸುತ್ತಿರುವವರಾಗಿದ್ದಾರೆ. ಆದರೆ ವಿವೇಕಾನಂದರ ಹೆಸರಲ್ಲಿ ಅಷ್ಟೂ ಯುವಕರನ್ನು ವಂಚಿಸಿದ್ದಾರೆ. ಹಿಂಸೆ, ದ್ವೇಷ, ವೈರತ್ವವವನ್ನೆ ತುಂಬಿಕೊಂಡಿರುವ ಬಿಜೆಪಿ, ಆರೆಸ್ಸೆಸ್ ಎಂದೂ ವಿವೇಕಾನಂದರ ಪಥದಲ್ಲಿ ಹೆಜ್ಜೆ ಇರಿಸಿಲ್ಲ ಎಂದು ಜಗದೀಶ್ ಸದಂ ವಾಗ್ದಾಳಿ ನಡೆಸಿದ್ದಾರೆ.

ದೇವರು, ಧರ್ಮವನ್ನು ದುರ್ಬಳಕೆ ಮಾಡಿಕೊಂಡ ರೀತಿಯಲ್ಲೆ ಸ್ವಾಮಿ ವಿವೇಕಾನಂದರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ರಾಮ ಮಂದಿರದ ಹೆಸರಲ್ಲಿ ರಾಜಕಾರಣ ಮಾಡಲು ಯತ್ನಿಸಿ ಸ್ವತಃ ಅಯೋಧ್ಯೆಯಲ್ಲೆ ಸೋತರು. ಈ ಕಾರಣಕ್ಕಾಗಿ ಬಿಜೆಪಿಯವರು ಶ್ರೀರಾಮನನ್ನೇ ನಿಂದಿಸುತ್ತಿದ್ದಾರೆ. ಜನತೆ ಇಂತಹ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈಮೊದಲು ಭಗತ್‍ಸಿಂಗ್ ಹೆಸರನ್ನು ಎತ್ತುತ್ತಿದ್ದರು. ಕ್ರಮೇಣ ಭಗತ್‍ಸಿಂಗ್ ಅವರ ಬದುಕಿನ ಹೋರಾಟಕ್ಕೂ ತಮ್ಮ ಹೇರಿಕೆಯ ಹಿಂದುತ್ವದ ಸಿದ್ಧಾಂತಕ್ಕೂ ಸರಿ ಹೊಂದದ ಕಾರಣ ಭಗತ್‍ಸಿಂಗ್‍ರನ್ನು ಕೈಬಿಟ್ಟರು. ಸ್ವಾಮಿ ವಿವೇಕಾನಂದರ ಬದುಕಿಗೂ ಬಿಜೆಪಿಗರ ಹಿಂದುತ್ವದ ಸಿದ್ಧಾಂತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಅವರ ಹಾದಿಯನ್ನು ಎಂದೂ ತುಳಿಯದ ಬಿಜೆಪಿಗರು ಈಗೀಗ ಸ್ವಾಮಿ ವಿವೇಕಾನಂದರ ಹೆಸರನ್ನೆ ಹೇಳುತ್ತಿಲ್ಲ. ಬಿಜೆಪಿಗೆ ವಿವೇಕಾನಂದರ ಬಗ್ಗೆ ನಿಜಕ್ಕೂ ಗೌರವವಿದ್ದರೆ ಕ್ಷಮೆ ಕೇಳಬೇಕು ಎಂದು ಜಗದೀಶ್ ಸದಂ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News