ಮುಡಾ ನಿವೇಶನ ಪ್ರಕರಣ | ದಾಖಲೆಗಳಿಲ್ಲದೆ ಬಿಜೆಪಿ ನಾಯಕರಿಂದ ಸಿದ್ದರಾಮಯ್ಯ ಧರ್ಮಪತ್ನಿ ಹೆಸರಿನ ತೇಜೋವಧೆ : ಎಂ.ಲಕ್ಷ್ಮಣ್

Update: 2024-07-04 16:47 GMT

ಬೆಂಗಳೂರು, ಜು.4: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಪ್ರಕರಣ ಸಂಬಂಧ ದಾಖಲೆಗಳಿಲ್ಲದೆ  ಆರ್.ಅಶೋಕ್ ಹಾಗೂ ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಮ್ಮ ಅವರ ಹೆಸರನ್ನು ಮಾಧ್ಯಮಗಳ ಮುಂದೆ ತಂದು ತೇಜೋವಧೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ತಿಳಿಸಿದ್ದಾರೆ.

ಗುರುವಾರ ನಗರದ ಕ್ವೀನ್ಸ್‍ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅಧಿಕಾರ ದುರುಪಯೋಗ ಮಾಡಿಕೊಂಡು, ತಮ್ಮ ಪತ್ನಿಗೆ ನಿವೇಶನ ಕೊಡಿಸಿದ್ದರೆ ಅದಕ್ಕೆ ಪೂರಕವಾಗಿರುವ ದಾಖಲೆಯನ್ನು ಮುಂದಿಟ್ಟು ವಿಜಯೇಂದ್ರ ಹಾಗೂ ಅಶೋಕ್ ಅವರು ಮಾತನಾಡಲಿ. ಈ ಮುಡಾ ಕರ್ಮಾಕಾಂಡ ಬಿಜೆಪಿ ಸರಕಾರದ್ದು. ಅಶೋಕ್ ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಅನರ್ಹರು ಎಂದು ಟೀಕಿಸಿದರು.

ಸರ್ವೇ ಸಂಖ್ಯೆ 464ರ ಕೆಸರೆ ಗ್ರಾಮದಲ್ಲಿ ಲೇಔಟ್ ಮಾಡಿ ನಿವೇಶನ ಹಂಚಿ ಜನ ಮನೆ ನಿರ್ಮಿಸಿ ವಾಸ ಮಾಡುತ್ತಿದ್ದಾರೆ. 31-10-1992ರಲ್ಲಿ ಈ ಗ್ರಾಮದಲ್ಲಿ 3 ಎಕರೆ 16 ಗುಂಟೆ ಜಾಗದ ಮಾಲಕರು ಜವರಯ್ಯ. ಇವರ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೋಟಿಫೈ ಮಾಡಿ ವಶಪಡಿಸಿಕೊಳ್ಳುತ್ತಾರೆ. 18-05-1998ರಲ್ಲಿ ಈ ಜಮೀನನ್ನು ಡಿನೋಟಿಫಿಕೇಷನ್ ಆದಾಗ ಈ ಜಾಗ ಜವರಯ್ಯ ಅವರ ಹೆಸರಿನಲ್ಲೇ ಇರುತ್ತದೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.

ನಂತರ 2005ರಲ್ಲಿ ಬಿ.ಎಂ.ಮಲ್ಲಿಕಾರ್ಜುನಸ್ವಾಮಿ ಎಂಬುವವರು ಈ ಜಾಗವನ್ನು ಖರೀದಿ ಮಾಡುತ್ತಾರೆ. ಮಲ್ಲಿಕಾರ್ಜುನಸ್ವಾಮಿ ಅವರು ಸಿದ್ದರಾಮಯ್ಯ ಅವರ ಬಾಮೈದ. ಅಂದರೆ ಧರ್ಮಪತ್ನಿಯ ಅಣ್ಣ. ನಂತರ 3ಎಕರೆ 16 ಗುಂಟೆ ಜಾಗವನ್ನು ದಾನಪತ್ರದ ಮೂಲಕ ಸಿದ್ದರಾಮಯ್ಯನವರ ಧರ್ಮಪತ್ನಿ ಪಾರ್ವತಮ್ಮ ಅವರಿಗೆ ದಾನಪತ್ರದ ಮೂಲಕ 2010ರಲ್ಲಿ ಈ ಜಮೀನನ್ನು ನೀಡುತ್ತಾರೆ. ಅನಂತರದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮರುನೋಟಿಫೈ ಮಾಡದೆ ಈ ಜಾಗ ಹಾಗೂ ಅದರ ಸುತ್ತಮುತ್ತಲ ಜಾಗಗಳಲ್ಲಿ ನಿವೇಶನ ಮಾಡಿ ಹಂಚಿಕೆ ಮಾಡುತ್ತಾರೆ ಎಂದು ಎಂ.ಲಕ್ಷ್ಮಣ್ ಹೇಳಿದರು.

2017ರಲ್ಲಿ ಪಾರ್ವತಮ್ಮ ಅವರು ಮುಡಾಗೆ ಪತ್ರ ಬರೆದು ನಮ್ಮ ಗಮನಕ್ಕೆ ಬಾರದೆ ನಮ್ಮ ಜಮೀನನ್ನು ನಿವೇಶನ ಮಾಡಿ ಹಂಚಿಕೆ ಮಾಡಿದ್ದೀರಿ ಎಂದು ದೂರು ದಾಖಲಿಸುತ್ತಾರೆ. ನಂತರ ಅವರು 27 ದೂರು ನೀಡಿದ್ದಾರೆ. ಇವರ 3 ಎಕರೆ 16 ಗುಂಟೆ ಜಾಗದಲ್ಲಿ ಮುಡಾ ಅವರು 59 ನಿವೇಶನಗಳನ್ನು ಮಾಡಿ ಹಂಚಿದ್ದಾರೆ ಎಂದು ಎಂ.ಲಕ್ಷ್ಮಣ್ ವಿವರಿಸಿದರು.

30-11-2021ರಲ್ಲಿ ಮುಡಾ ಒಂದು ನಿರ್ಣಯಕ್ಕೆ ಬಂದು ಇವರಿಗೆ ಪರ್ಯಾಯವಾಗಿ ಜಾಗ ನೀಡಲು ತೀರ್ಮಾನಿಸುತ್ತದೆ. ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಹೊಸ ನೋಟಿಫಿಕೇಶನ್ ಮಾಡಿ ಜಮೀನು ವಶಪಡಿಸಿಕೊಂಡವರಿಗೆ 40:60ರ ಅನುಪಾತದಲ್ಲಿ ಭೂಮಿ ನೀಡಲು ತೀರ್ಮಾನಿಸುತ್ತದೆ. ಅಂದರೆ ರೈತನಿಂದ 10 ಎಕರೆ ಭೂಮಿ ವಶಪಡಿಸಿಕೊಂಡರೆ ಶೇ.60ರಷ್ಟು ರೈತರಿಗೆ ಶೇ.40ರಷ್ಟು ಪ್ರಾಧಿಕಾರಕ್ಕೆ ಹೋಗುವಂತೆ ಮಾಡಲಾಗುತ್ತದೆ. 2021ರಲ್ಲಿ ಮುಡಾ ಸಂಸ್ಥೆ ಕೂಡ ಇದೇ ರೀತಿ 50:50 ಅನುಪಾತದಲ್ಲಿ ಭೂಮಿ ಹಂಚಿಕೆಗೆ ನಿರ್ಣಯ ಹೊರಡಿಸಲಾಗುತ್ತದೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.

ರಾಜ್ಯ ಸರಕಾರದ ಆದೇಶದ ಮೇರೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳದೇ 3 ಎಕರೆ 26 ಗುಂಟೆ ಜಾಗವನ್ನು ಉಪಯೋಗಿಸಿಕೊಂಡಿರುವ ಅನ್ವಯ 50:50 ಅನುಪಾತದಲ್ಲಿ ನಿವೇಶನ ಪರಿಹಾರ ರೂಪದಲ್ಲಿ ಮಂಜೂರು ಮಾಡಲಾಗಿದೆ ಎಂದು ಮುಡಾ ವತಿಯಿಂದ ಪಾರ್ವತಮ್ಮ ಅವರಿಗೆ ಪತ್ರ ನೀಡಲಾಗಿದೆ. ಪ್ರಾಧಿಕಾರಕ್ಕೆ ಇದೇ ಜಾಗದಲ್ಲಿ ನಿವೇಶನ ನೀಡಿ ಎಂದು ಕೇಳಿಲ್ಲ. ಪ್ರಾಧಿಕಾರವೇ ತನ್ನ ಸ್ವಂತ ನಿರ್ಧಾರದ ಮೇಲೆ 14 ನಿವೇಶನಗಳನ್ನು ವಿಜಯನಗರ ಮೂರು ಹಾಗೂ ನಾಲ್ಕನೇ ಹಂತದಲ್ಲಿ ನೀಡಿದ್ದಾರೆ ಎಂದು ಎಂ.ಲಕ್ಷ್ಮಣ್ ಹೇಳಿದರು.

ಕಾನೂನಿನಲ್ಲಿ ಭೂಸ್ವಾಧೀನ ಮಾಡಿದ ಜಾಗದಲ್ಲೇ ಬದಲಿ ಜಾಗ ನೀಡಬೇಕು ಎಂದು ಇದೆ. ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಪ್ರಕಾರ ಬೇರೆ ಜಾಗದಲ್ಲೂ ನಿವೇಶನ ಹಂಚಲು ಅವಕಾಶವಿದೆ. ಅದರ ಪ್ರಕಾರ ಪಾರ್ವತಮ್ಮ ಅವರಿಗೆ ನಿವೇಶನ ನೀಡಿದ್ದಾರೆ. ಪಾರ್ವತಮ್ಮನವರು ಇಂತಹುದೇ ಜಾಗದಲ್ಲಿ ನಿವೇಶನ ಬೇಕು ಎಂದು ಅರ್ಜಿ ಹಾಕಿಲ್ಲ ಎಂದು ಎಂ.ಲಕ್ಷ್ಮಣ್ ತಿಳಿಸಿದರು.

ಮೂಡಾದಲ್ಲಿ 5 ಸಾವಿರ ಕೋಟಿಯಷ್ಟು ಅಕ್ರಮ ನಡೆದಿದ್ದರೆ ಅದೆಲ್ಲವೂ ಬಿಜೆಪಿ ಆಡಳಿತ ಅವಧಿಯಲ್ಲಿ ಆಗಿರುವ ಅಕ್ರಮ. ಪಾರ್ವತಮ್ಮ ಅವರು ಅನ್ಯಾಯವಾಗಿ ನಿವೇಶನ ಪಡೆದಿರುವ ಒಂದು ದಾಖಲೆ ಇದ್ದರೆ ಅದನ್ನು ಅಶೋಕ್ ಅವರು ಮಾಧ್ಯಮಗಳ ಮುಂದೆ ಇಡಬೇಕು, ಇಲ್ಲದಿದ್ದರೆ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆ ಅಶೋಕ್‍ಗೆ ಇಲ್ಲ ಎಂದು ಎಂ.ಲಕ್ಷ್ಮಣ್ ಹೇಳಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News