ಬಿಜೆಪಿ ಎಸ್‍ಸಿಪಿ-ಟಿಎಸ್‍ಪಿ ಕಾಯ್ದೆ ಜಾರಿಗೆ ತಂದಿದ್ದರೇ? : ಸಿದ್ದರಾಮಯ್ಯ

Update: 2024-07-22 16:29 GMT

ಬೆಂಗಳೂರು: ನಮ್ಮ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ ಎಸ್‍ಸಿಪಿ-ಟಿಎಸ್‍ಪಿ ಕಾಯ್ದೆ ಮಾಡಿದೆ. ಆದರೆ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಕಾಯ್ದೆ ಮಾಡಿದ್ದಾರಾ, 10 ವರ್ಷದಿಂದ ಪ್ರಧಾನಿ ಮೋದಿ ಕೇಂದ್ರದಲ್ಲಿ ಮಾಡಿದ್ದಾರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸೋಮವಾರ ಪರಿಷತ್ ವಾಲ್ಮೀಕಿ ನಿಗಮದ ಹಗರಣ ವಿಷಯ ಮೇಲಿನ ಚರ್ಚೆಗೆ ಉತ್ತರಿಸಿದ ಸಿದ್ದರಾಮಯ್ಯ, ನಾವು ಪರಿಶಿಷ್ಟರ ಪರ ಇಲ್ಲ ಎನ್ನಲು ಬಿಜೆಪಿಗೆ ಯಾವುದೇ ಆಧಾರವಿಲ್ಲ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಎಸ್‍ಇಪಿ-ಟಿಎಸ್‍ಪಿ ಕಾಯ್ದೆ ಮಾಡಿಲ್ಲ. ಅವರಿಗೆ ದಲಿತರ ಮೇಲೆ ಮಾತನಾಡುವ ನೈತಿಕತೆ ಮತ್ತು ಯಾವ ಬದ್ಧತೆಯೂ ಇಲ್ಲ ಎಂದರು.

ನಾವು ಎಸ್‍ಸಿಪಿ-ಟಿಎಸ್‍ಪಿ ಕಾಯ್ದೆಯಡಿ 2018ರಲ್ಲಿ 29 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಿದರೆ ನಂತರದ ಐದು ವರ್ಷದಲ್ಲಿ ಬಿಜೆಪಿಯವರು ಇದನ್ನು ದಾಟಿಲ್ಲ. ನಾವು ಈಗ 39 ಸಾವಿರ ಕೋಟಿ ರೂ.ದಾಟಿದ್ದೇವೆ. ಪ್ರತಿವರ್ಷ ಜಾಸ್ತಿಯಾಗಬೇಕೋ, ಇಲ್ಲವೋ, ಇವರು ಯಾಕೆ ಜಾಸ್ತಿ ಮಾಡಲಿಲ್ಲ? ಯಾರು ಎಸ್ಸಿ-ಎಸ್ಟಿ ವಿರೋಧಿಗಳು ಹಾಗಾದರೆ?, ಅಂಬೇಡ್ಕರ್ ಹೇಳಿದಂತೆ ನಡೆದುಕೊಳ್ಳುತ್ತಿರುವ ಯಾವುದಾದರೂ ಸರಕಾರ ಇದ್ದರೆ ಅದು ಕಾಂಗ್ರೆಸ್ ಸರಕಾರ ಎಂದು ಸಿದ್ದರಾಮಯ್ಯ ಹೇಳಿದರು.

ಇಡೀ ದೇಶದಲ್ಲಿ ಗುತ್ತಿಗೆಯಲ್ಲಿ ಎಸ್ಸಿ-ಎಸ್ಟಿ ಮೀಸಲಾತಿ ತಂದಿದ್ದು ನಾವೇ ಮೊದಲು. ಕೇಂದ್ರದಲ್ಲಿ, ಅನೇಕ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲಿ ಯಾಕೆ ತಂದಿಲ್ಲ? ಬಡ್ತಿಯಲ್ಲಿ ಮೀಸಲಾತಿ ತಂದಿದ್ದು ಕಾಂಗ್ರೆಸ್ ಸರಕಾರ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಎನ್.ರವಿಕುಮಾರ್, ಗ್ಯಾರಂಟಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಎಲ್ಲಿ ನೀವು ಹೇಳಿದ ಪ್ರಮಾಣದ ಹಣ ಬಳಕೆಯಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಕೆರಳಿದ ಸಿದ್ದರಾಮಯ್ಯ, ಪದೇ ಪದೇ ನನ್ನ ಉತ್ತರಕ್ಕೆ ಅಡ್ಡಿಪಡಿಸಬೇಡಿ, ನಿಮ್ಮ ಪ್ರಶ್ನೆಗಳನ್ನು ನಾನು ಉತ್ತರ ಕೊಟ್ಟು ಮುಗಿಸಿದ ನಂತರ ಕೇಳಿ, ನಿಮ್ಮ ಎಲ್ಲ ಗೊಂದಲಗಳಿಗೆ ಉತ್ತರ ನೀಡುತ್ತೇನೆ ಎಂದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಸದಸ್ಯ ಸಿ.ಟಿ.ರವಿ, ನಮ್ಮ ಸಂಶಯ ಪ್ರಶ್ನೆಗಳಿಗೆ ಸಿಎಂ ಉತ್ತರ ಕೊಡಬೇಕು. ಅದು ಅವರ ಕರ್ತವ್ಯ. ಸುಮ್ಮನೇ ಏನೇನೋ ಕಥೆ ಹೇಳುವುದಲ್ಲ ಎಂದರು.

ಬಿಜೆಪಿ ನಡೆಗೆ ಅಸಮಧಾನಗೊಂಡ ಸಭಾಪತಿ, ‘ಹೀಗೆ ಮಾಡಿದರೆ ಸದನ ಮುಂದೂಡಿ ಹೊರಹೋಗುತ್ತೇನೆ ಅಷ್ಟೇ’ ಎಂದರು. ಅಷ್ಟಕ್ಕೂ ಸುಮ್ಮನಾಗದ ಸಿ.ಟಿ.ರವಿ, ‘ಪ್ರಜಾಪ್ರಭುತ್ವ ಜಬರ್‍ದಸ್ತಿಯ ಮೇಲೆ ನಡೆಯಲ್ಲ. ಮಾತನಾಡಲು ಅನುಮತಿ ಕೊಟ್ಟ ಮೇಲೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ಮಾಡುತ್ತಾರೆ. ಸಿಎಂ ದುರ್ಬಲರಾದಾಗ ನಮ್ಮ ವಿರುದ್ಧ ಕೆಂಡಕಾರುತ್ತಾರೆಂದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯರು, ಇಲ್ಲಿ ವಿರೋಧ ಪಕ್ಷದ ನಾಯಕರ ಆಡಿಷನ್ ನಡೆಯುತ್ತಿದೆ ಎಂದು ಲೇವಡಿ ಮಾಡಿದರು.

ಈ ವೇಳೆ ಮಾತು ಮುಂದುವರೆಸಿದ ಸಿದ್ದರಾಮಯ್ಯ, ‘ಸಿ.ಟಿ.ರವಿ ಮತ್ತು ರವಿಕುಮಾರ್ ನಡುವೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಪೈಪೋಟಿ ಇದೆ. ಹೈಕಮಾಂಡ್ ಮೆಚ್ಚಿಸಲು ಈ ರೀತಿ ನನಗೆ ಅಡ್ಡಿಪಡಿಸುತ್ತಿದ್ದಾರೆ ಎಂದರು. ಇದಕ್ಕೆ ತಿರುಗೇಟು ನೀಡಿದ ರವಿಕುಮಾರ್, ಎಸ್ಟಿ ಹಗರಣ ನಿಲುವಳಿ ತಂದರೆ ಬಿಜೆಪಿಯವರ ಬಗ್ಗೆ ಸಿಎಂ ಮಾತನಾಡುತ್ತಿದ್ದಾರೆ. ವಿಷಯಾಂತರ ಮಾಡಿದ್ದಾರೆ. ಇದನ್ನು ನಾವು ಒಪ್ಪಲ್ಲ’ ಎಂದರು.

ಬಿಜೆಪಿ ಸದಸ್ಯರು ಪದೇ ಪದೇ ಅಡ್ಡಿಪಡಿಸಿದ್ದಕ್ಕೆ ಆಕ್ರೋಶಗೊಂಡ ಸಿಎಂ, ಲಿಖಿತ ಉತ್ತರ ಓದಿ ಬಿಡುತ್ತೇನೆ, ಕಡತಕ್ಕೆ ಸೇರಿಸಿ ಎನ್ನುತ್ತಾ ಉತ್ತರವನ್ನು ಓದಿದರು. ಸಿದ್ದರಾಮಯ್ಯ ಲಿಖಿತ ಉತ್ತರ ಓದಿದ್ದಕ್ಕೆ ಖಂಡಿಸಿ ಬಿಜೆಪಿ, ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ರಾಜಕೀಯ ಘೋಷಣೆಗಳನ್ನು ಕೂಗಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News