ರಾಜ್ಯದಲ್ಲಿ ತೆರಿಗೆಯೇತರ ವರಮಾನ ಸಂಗ್ರಹ ಅವಕಾಶಗಳನ್ನು ಪರಿಶೀಲಿಸಲು ಐವರ ಸಮಿತಿ ರಚನೆ

Update: 2024-09-07 11:34 GMT

ಬೆಂಗಳೂರು : ರಾಜ್ಯದಲ್ಲಿ ತೆರಿಗೆಯೇತರ ವರಮಾನ ಸಂಗ್ರಹ ಹೆಚ್ಚಳಕ್ಕೆ ಇರುವ ಅವಕಾಶಗಳನ್ನು ಪರಿಶೀಲಿಸಲು ನಿವೃತ್ತ ಐಎಎಸ್ ಅಧಿಕಾರಿ ಕೆ.ಪಿ. ಕೃಷ್ಣನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

ರಾಜ್ಯ ಸರಕಾರ ಈ ಸಂಬಂಧ ಆ.25ರಂದು ಆದೇಶ ಹೊರಡಿಸಿದ್ದು, ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸುಂಕ ಮಂಡಳಿಯ (ಸಿಬಿಐಸಿ) ಮಾಜಿ ಅಧ್ಯಕ್ಷ ನಜೀಬ್ ಶಾ, ನಿವೃತ್ತ ಐಎಎಸ್ ಅಧಿಕಾರಿ ಎಚ್‌. ಶಶಿಧರ್, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆಯ ಪ್ರಾಧ್ಯಾಪಕ ಕೃಷ್ಣರಾಜ್ ಮತ್ತು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಮಿತಿ ಸದಸ್ಯರಾಗಿದ್ದಾರೆ.

ವಿವಿಧ ವಲಯಗಳಲ್ಲಿ ಆಸ್ತಿ ನಗದೀಕರಣದ ಅವಕಾಶಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಪಾರದರ್ಶಕವಾಗಿ ಹಾಗೂ ನ್ಯಾಯಯುತವಾಗಿ ಜಾರಿಗೊಳಿಸಲು ಸೂಕ್ತ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಅಗತ್ಯವಾದ ಶಿಫಾರಸು ಒಳಗೊಂಡ ಸಮಗ್ರ ವರದಿ ನೀಡಲು ಸಮಿತಿಗೆ ಸೂಚಿಸಿದೆ.

ವರದಿ ಸಲ್ಲಿಸಲು ಒಂದು ವರ್ಷ ಅವಧಿ ನಿಗದಿಪಡಿಸಲಾಗಿದೆ. ಎಲ್ಲ ಸರಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವ ವಿದ್ಯಾನಿಲಯಗಳು, ನಿಗಮ-ಮಂಡಳಿಗಳು ಸಮಿತಿಗೆ ಅಗತ್ಯವಾದ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News