ಶಾಸಕ ಮುನಿರತ್ನ ಗಡಿಪಾರು ಮಾಡಲು ಕೆಪಿಸಿಸಿ ಆಗ್ರಹ

Update: 2024-09-15 16:15 GMT

 ಮುನಿರತ್ನ

ಬೆಂಗಳೂರು : ಜಾತಿ ನಿಂದನೆ, ಮಹಿಳೆಯರ ಅವಹೇಳನ ಆರೋಪದಲ್ಲಿ ಬಂಧಿತರಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿಯ ಮುನಿರತ್ನ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಜತೆಗೆ ಅವರನ್ನು ಕರ್ನಾಟಕ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಕೆಪಿಸಿಸಿ ಎಸ್‍ಸಿ ವಿಭಾಗದ ಅಧ್ಯಕ್ಷ ಧರ್ಮಸೇನ್ ಆಗ್ರಹಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಧರ್ಮಸೇನ್, ಬಿಜೆಪಿ ಶಾಸಕ ಮುನಿರತ್ನ ಅವರು ತಮ್ಮ ಮನೆಯೊಳಗೆ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇಂತಹವರು ನಮ್ಮ ಸಮಾಜಕ್ಕೆ ಬೇಕಿಲ್ಲ. ಇವರನ್ನು ಕಿತ್ತೊಗೆಯಬೇಕು. ರಜೆ ದಿನವೇ ನನ್ನನ್ನು ಬಂಧಿಸಿದ್ದಾರೆಂದು ಮುನಿರತ್ನ ಹೇಳಿದ್ದಾರೆ. ಆದರೆ, ಅವರು ದಲಿತರನ್ನು ನಿಂದಿಸುವಾಗ ದಿನ, ಗಳಿಗೆ ನೋಡಿದ್ದರಾ? ನೀವು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಕಾಂಗ್ರೆಸ್ ಪಕ್ಷದ ಮೇಲೆ ದೂರಿದರೆ ಏನು ಪ್ರಯೋಜನ?’ ಎಂದು ವಾಗ್ದಾಳಿ ನಡೆಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷವಾಗಿದ್ದರೂ ಇನ್ನೂ ಜಾತಿ ನಿಂದನೆ ಮುಂದುವರೆಯುತ್ತಿದ್ದರೆ ಏನರ್ಥ? ಇಂತಹವರಿಂದ ನಾವು ಇನ್ನು ಎಷ್ಟು ದಿನ ಶೋಷಣೆಗೆ ಒಳಗಾಗಬೇಕು. ನೊಂದು-ಬೆಂದಿರುವ ಜನರನ್ನು ಜಾತಿ ಹೆಸರಲ್ಲಿ ನಿಂದಿಸುವುದು ಎಷ್ಟು ಸರಿ? ಇಂತಹವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಎಚ್ಚರಿಸಿದರು.

ಕೆಪಿಸಿಸಿ ಎಸ್.ಸಿ ವಿಭಾಗದಿಂದ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಮುನಿರತ್ನ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಜತೆಗೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕ ಮುನಿರತ್ನ ವಿರುದ್ಧ ದೂರು ದಾಖಲಿಸುತ್ತೇವೆ. ಕಾಂಗ್ರೆಸ್ ಪಕ್ಷ ದಲಿತರ ಪರ ನಿಲ್ಲಲಿದೆ. ದಲಿತರ ಪರವಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News