ಪತ್ರಕರ್ತರ ಸಹಕಾರ ಸಂಘಕ್ಕೆ ಆರ್ಥಿಕ ನೆರವು : ಸಿಎಂ ಭರವಸೆ

Update: 2024-09-20 15:33 GMT
ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕರ್ನಾಟಕ ಪತ್ರಕರ್ತರ ಸಹಕಾರ ಸಂಘಕ್ಕೆ ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಶುಕ್ರವಾರ ಸಂಘದ ಅಧ್ಯಕ್ಷ ರಮೇಶ್ ಪಾಳ್ಯ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. 1949ರಲ್ಲಿ ಆರಂಭವಾದ ಪತ್ರಕರ್ತರ ಸಹಕಾರ ಸಂಘ ರಾಜ್ಯದ ಪತ್ರಕರ್ತರ ಏಕೈಕ ಹಣಕಾಸಿನ ಪ್ರಾತಿನಿಧಿಕ ಸಂಸ್ಥೆ. ಈ ಸಂಸ್ಥೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಪತ್ರಕರ್ತರನ್ನು ಸದಸ್ಯರನ್ನಾಗಿ ಹೊಂದಿದೆ. ಆಡಿಟ್ ವರ್ಗೀಕರಣದಲ್ಲಿ ನಮ್ಮ ಸಂಸ್ಥೆ ‘ಎ' ಶ್ರೇಣಿ ಪಡೆದಿರುವ ಸಂಸ್ಥೆ. ಅತ್ಯುತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಗೂ ಪಾತ್ರವಾಗಿದೆ. ನಿರಂತರ ಏಳು ದಶಕಗಳಿಂದ ಪತ್ರಕರ್ತರ ಸಹಕಾರ ಸಂಘ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಲಾಗಿದೆ.

ಸಂಘದ ಸದಸ್ಯರಿಂದ ಆರೋಗ್ಯದ ನೆರವಿನ ಬೇಡಿಕೆ ದಿನೇದಿನೆ ಹೆಚ್ಚಾಗುತ್ತಿದೆ. ಹೀಗಾಗಿ ಪತ್ರಕರ್ತರ ಆರೋಗ್ಯದ ಅನುಕೂಲಕ್ಕಾಗಿ ಆರ್ಥಿಕ ನೆರವು ಬೇಕಿದೆ. ವೈದ್ಯಕೀಯ ನೆರವಿಗೆ ರಾಜ್ಯ ಸರಕಾರದಿಂದ 5 ಕೋಟಿ ರೂ.ಅನುದಾನ ನೀಡಬೇಕೆಂದು ಸಂಘದ ಅಧ್ಯಕ್ಷ ರಮೇಶ್ ಪಾಳ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಂಘದ ಶ್ರೇಯೋಭಿವೃದ್ಧಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಜೊತೆಗೆ ಕೆಲವು ಹಿರಿಯ ಪತ್ರಕರ್ತರು ಸಂಘದಲ್ಲಿ ಸಾಲ ಪಡೆದಿದ್ದು, ಕೋವಿಡ್ ಸಮಯದಲ್ಲಿ ಹಾಗೂ ಅನಂತರ ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ. ಕೋವಿಡ್ ಆರ್ಥಿಕ ಸಂಕಷ್ಟದಿಂದ ನಿಗಧಿತ ಸಮಯಕ್ಕೆ ಸಾಲ ಮರುಪಾವತಿ ಮಾಡದೆ ಸುಸ್ತಿದಾರರಾಗಿದ್ದಾರೆ. ಹೀಗಾಗಿ ಸಂಸ್ಥೆಗೆ ಆರ್ಥಿಕ ನೆರವು ಅಗತ್ಯ. ಹೀಗಾಗಿ ರಾಜ್ಯ ಸರಕಾರ ಪತ್ರಕರ್ತರ ಸಹಕಾರ ಸಂಘಕ್ಕೆ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ನಿಯೋಗವು ಸಿಎಂಗೆ ಮನವಿ ಮಾಡಿಕೊಂಡಿತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಪತ್ರಕರ್ತರ ಸಹಕಾರ ಸಂಘಕ್ಕೆ ನೆರವು ನೀಡುವ ಭರವಸೆ ನೀಡಿದರು.

ನೇಮಕದಲ್ಲಿ ಪರಿಗಣಿಸಿ: ಮಾಧ್ಯಮಕ್ಕೆ ಸಂಬಂಧಿಸಿದ ನಿಗಮ ಮಂಡಳಿ ಅಥವಾ ಅಕಾಡೆಮಿಗಳಿಗೆ ನೇಮಕ ಮಾಡುವ ಸಂದರ್ಭದಲ್ಲಿ ಪತ್ರಕರ್ತರ ಸಹಕಾರ ಸಂಘವನ್ನೂ ಪರಿಗಣಿಸಬೇಕು. ಸಹಕಾರ ಸಂಘದ ಪ್ರತಿನಿಧಿಗಳನ್ನು ನಿರ್ದೇಶಕರು ಹಾಗೂ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿಕೊಳ್ಳಲಾಯಿತು.

ನಿಯೋಗದಲ್ಲಿ ಸಂಘದ ಉಪಾಧ್ಯಕ್ಷ ದೊಡ್ಡ ಬೊಮ್ಮಯ್ಯ, ಖಜಾಂಚಿ ಮೋಹನ್ ಕುಮಾರ್ ಬಿ.ಎಸ್., ನಿರ್ದೇಶಕರಾದ ರಮೇಶ್ ಹಿರೇಜಂಬೂರು, ಸೋಮಶೇಖರ್ ಕೆ.ಎಸ್.(ಸೋಮಣ್ಣ)ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News