ಬಿಜೆಪಿ ಅಧಿಕಾರದ ರಾಜ್ಯಗಳಲ್ಲಿ ಮಹಿಳಾ ದೌರ್ಜನ್ಯ ಹೆಚ್ಚಳ : ಶಿಲ್ಪಿ ಆರೋರ

Update: 2024-09-15 16:10 GMT

ಬೆಂಗಳೂರು : ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಉಸ್ತುವಾರಿ ಶಿಲ್ಪಿ ಆರೋರ ಆರೋಪಿಸಿದ್ದಾರೆ.

ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಸನ್ಮಾನ ಮಾಡಿ ಕರೆಸಿಕೊಳ್ಳಲಾಗುತ್ತದೆ. ಮಹಿಳಾ ದೌರ್ಜನ್ಯ ಎಸಗಿರುವ ಹರಿಯಾಣದ ನಕಲಿ ಬಾಬಾ ಒಬ್ಬನಿಗೆ ಹತ್ತು ದಿನ ಪೆರೋಲ್ ಸಿಗುತ್ತದೆ. ಉತ್ತರಾಖಂಡದಲ್ಲಿ ನರ್ಸ್ ಒಬ್ಬಳ ಮೇಲೆ ಅತ್ಯಾಚಾರವಾಗುತ್ತದೆ. ಇದೆಲ್ಲವೂ ಬಿಜೆಪಿ ಆಡಳಿತದ ರಾಜ್ಯಗಳ ಕರ್ಮಕಾಂಡ ಎಂದರು.

ಬಿಜೆಪಿ ಸರಕಾರಕ್ಕೆ ಹೋಲಿಸಿದರೆ ಕಾಂಗ್ರೆಸ್ ಸರಕಾರವು ಮಹಿಳೆಯರ ವಿರುದ್ಧದ ದೌರ್ಜನ್ಯಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಇತ್ತೀಚೆಗೆ ಆಟೋ ಚಾಲಕನೊಬ್ಬ ಮಹಿಳೆಗೆ ಹೊಡೆದ ಪ್ರಕರಣ, ಮುನಿರತ್ನ ಪ್ರಕರಣ ಇದಕ್ಕೆ ಉದಾಹರಣೆಯಾಗಿದೆ ಎಂದು ಶಿಲ್ಪಿ ಆರೋರ ಹೇಳಿದರು.

ಮಹಿಳಾ ಪ್ರಾತಿನಿಧ್ಯ ಮತ್ತು ಮಹಿಳಾ ಮೀಸಲಾತಿ ಎರಡು ಹೆಚ್ಚಾಗಬೇಕು. ದಿನದಿಂದ ದಿನಕ್ಕೆ ಮಹಿಳೆಯರ ಮೇಲಿನ ಶೋಷಣೆ ಹೆಚ್ಚಾಗುತ್ತಿದೆ. ಮಹಿಳೆಯರ ಹಕ್ಕುಗಳನ್ನು ಪುರುಷರು ನಿರ್ಧರಿಸುತ್ತಿದ್ದಾರೆ. ಮಹಿಳೆಯರು ಯಾವ ಬಟ್ಟೆ ಹಾಕಬೇಕು, ಏಕೆ ಮೇಕಪ್ ಮಾಡಿಕೊಳ್ಳಬೇಕು, ಮಧ್ಯರಾತ್ರಿಯಲ್ಲಿ ಅವಳು ಏಕೆ ಓಡಾಡಬೇಕು ಹೀಗೆ ನೂರಾರು ಪ್ರಶ್ನೆಗಳನ್ನು ನಮಗೆ ಮಾಡುತ್ತಿದ್ದಾರೆ ಎಂದು ಶಿಲ್ಪಿ ಆರೋರ ದೂರಿದರು.

ಮಹಿಳಾ ಕಾಂಗ್ರೆಸ್ ಪ್ರಾರಂಭ ಆದ ದಿನದಿಂದಲೂ ಮಹಿಳಾ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದೆ. ‘ನಾರಿ ನ್ಯಾಯ’ ಎನ್ನುವ ಕಾರ್ಯಕ್ರಮದ ಹೆಸರಿನಲ್ಲಿ ಮಹಿಳೆಯರ ಸಂಘಟನೆ ಮಾಡಲಾಗಿದೆ. ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು. ಇದೇ ನಮ್ಮೆಲ್ಲರ ಮುಂದಿರುವ ಗುರಿ ಎಂದು ಶಿಲ್ಪಿ ಆರೋರ ತಿಳಿಸಿದರು.

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಮಾತನಾಡಿ, ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಪಕ್ಷ ನಮ್ಮದು. ಇಂದಿರಾಗಾಂಧಿ, ರಾಜೀವ್ ಗಾಂಧಿ, ನೆಹರು ಅವರು ಸೇರಿದಂತೆ ಅನೇಕ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ನಾವುಗಳು ನಡೆಯುತ್ತಾ ಇದ್ದೇವೆ. ಮಹಿಳೆಯರ ಸಮಾನ ಹಕ್ಕುಗಳು ಹಾಗೂ ಅಧಿಕಾರದಲ್ಲಿ ಯಾವುದೇ ಜಾತಿ, ಧರ್ಮ, ಗಡಿಗಳನ್ನು ಮೀರಿ ನೀಡಬೇಕು ಎನ್ನುವ ಹಕ್ಕನ್ನು ಸಂವಿಧಾನ ನೀಡಿದೆ ಎಂದರು.

ನಿರ್ಣಾಯಕ ಸ್ಥಾನದಲ್ಲಿ ಕುಳಿತಿರುವ ಮಹಿಳೆಗೆ ಇನ್ನೂ ಶೇ.50ರಷ್ಟು ಮೀಸಲಾತಿ ಸೌಲಭ್ಯ ಸಿಕ್ಕಿಲ್ಲ. 30 ವರ್ಷಗಳ ಹೋರಾಟಕ್ಕೆ ಇನ್ನೂ ಫಲ ಸಿಕ್ಕಿಲ್ಲ. ರಾಜೀವ್‍ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿ ಕೊಟ್ಟರು. ಮುಂಬರುವ ಅನೇಕ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳನ್ನು ಮೀಸಲು ಇರಿಸಬೇಕು ಎಂದು ಸೌಮ್ಯಾ ರೆಡ್ಡಿ ಮನವಿ ಮಾಡಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ದೇಶದ ಜನಸಂಖ್ಯೆಯ ಶೇ.50ರಷ್ಟು ಇರುವ ಮಹಿಳೆಯರಿಗೆ ಈಗಲಾದರೂ ಎಲ್ಲಾ ಕ್ಷೇತ್ರಗಳಲ್ಲಿ ಶೇ.50ರಷ್ಟು ಮೀಸಲಾತಿ ನಿಗದಿ ಮಾಡಲು ಸರಕಾರ ಮುಂದಾಗಬೇಕು. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ದಿಕ್ಕನ್ನು ತೀರ್ಮಾನ ಮಾಡುವ ಶಕ್ತಿ ಈಗಲಾದರೂ ಮಹಿಳೆಯರಿಗೆ ದೊರಕಬೇಕಾಗಿದೆ. ನಮ್ಮ ಹೋರಾಟದ ಶಕ್ತಿ ಬರಬೇಕೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಸದಸ್ಯರನ್ನಾಗಿ ಮಾಡಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಪದ್ಮಾವತಿ, ಕೆಪಿಸಿಸಿ ಉಪಾಧ್ಯಕ್ಷೆ ಅಕ್ಕೈ ಪದ್ಮಶಾಲಿ, ಕುಸುಮ ಹನುಮಂತರಾಯಪ್ಪ, ಕೆಪಿಸಿಸಿ ಕಾರ್ಯದರ್ಶಿ ರುಕ್ಮಿಣಿ ಸಾಹುಕಾರ್ ಸೇರಿದಂತೆ ಅನೇಕ ಮಹಿಳಾ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News