ರಮೇಶ್ ಜಾರಕಿಹೊಳಿ-ಯತ್ನಾಳ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿ
ಕಲುಬರಗಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ನಾಯಕರಾಗಿ ತಮ್ಮನ್ನು ಒಪ್ಪಿಕೊಳ್ಳುವುದಿಲ್ಲ ಎಂದಿರುವುದನ್ನು ಸ್ವಾಗತಿಸುತ್ತೇನೆ. ನಾನು ನಾಯಕ ಎಂದು ಹೊರಟಿಲ್ಲ, ನಮ್ಮ ಪಕ್ಷದ ವರಿಷ್ಠರು, ಹಿರಿಯರು ನನ್ನನ್ನು ರಾಜ್ಯಾಧ್ಯಕ್ಷನಾಗಿ ನೇಮಕ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷನಾಗಿ, ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಒಂಟಿಗಾಲಿನಲ್ಲಿ ನಿಲ್ಲಿಸುವ ಕೆಲಸವನ್ನು ಬೆಂಗಳೂರು-ಮೈಸೂರು ಪಾದಯಾತ್ರೆ ಮೂಲಕ ಯಶಸ್ವಿಯಾಗಿ ಮಾಡಿದ್ದೇವೆ. ರಮೇಶ್ ಜಾರಕಿಹೊಳಿ ಬಾಯಲ್ಲಿ ಪಕ್ಷ, ಪಕ್ಷದ ಸಿದ್ಧಾಂತದ ವಿಚಾರ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿರುಗೇಟು ನೀಡಿದರು.
ಎಐಸಿಸಿ ಅಧ್ಯಕ್ಷರನ್ನು ಓಲೈಸಲು ಸಂಪುಟ ಸಭೆ : ಮುಖ್ಯಮಂತ್ರಿ ತಮ್ಮ ಕುರ್ಚಿ ಅಲ್ಲಾಡುತ್ತಿರುವ ಸಂದರ್ಭದಲ್ಲಿ ಕುರ್ಚಿ ಉಳಿಸಿಕೊಳ್ಳಲು ಮತ್ತು ಎಐಸಿಸಿ ಅಧ್ಯಕ್ಷರನ್ನು ಓಲೈಸಲು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಚಿವ ಸಂಪುಟ ಸಭೆಯ ನಾಟಕ ಮಾಡಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು.
ನಿನ್ನೆ ಆಗಿರುವ ಸಚಿವ ಸಂಪುಟ ಸಭೆಯಿಂದ ಈ ಭಾಗದ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಈ ಭಾಗಕ್ಕೆ 5 ಸಾವಿರ ಕೋಟಿ ರೂ.ಕೊಡುತ್ತೇವೆ, ಇಲ್ಲಿ ಶಾಲಾ ಕಾಲೇಜು ಮಾಡುತ್ತೇವೆ. ಸಾವಿರಾರು ಕೋಟಿ ರೂ.ಗಳ ಪ್ಯಾಕೇಜ್ ಕೊಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ. ಒಂದು ವರ್ಷದ ಹಿಂದೆಯೂ ಇದೇ ಮಾತುಗಳನ್ನು ಹೇಳಿದ್ದರು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ಆಕ್ಷೇಪಿಸಿದರು.