ಸಂಜಯ್ ಗಾಯಕ್ವಾಡ್‍ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಒತ್ತಾಯ

Update: 2024-09-17 17:12 GMT

ಬೆಂಗಳೂರು : ಶಿಂಧೆ ಬಣದ ಶಿವಸೇನೆಯ ಶಾಸಕ ಸಂಜಯ್ ಗಾಯಕ್ವಾಡ್ ಅವರು ರಾಹುಲ್ ಗಾಂಧಿ ಅವರ ಸಂದರ್ಶನವನ್ನು ತಿರುಚಿ ನೀಡಿರುವ ಹೇಳಿಕೆ ಕೀಳುಮಟ್ಟದಾಗಿದ್ದು, ಕೂಡಲೇ ಸಂಜಯ್ ಗಾಯಕ್ವಾಡ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಮಂಗಳವಾರ ಇಲ್ಲಿನ ಕೆಪಿಸಿಸಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಬಗ್ಗೆ ಮಾತನಾಡಿರುವ ಶಾಸಕ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಆತನಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಮಹಾರಾಷ್ಟ್ರದಲ್ಲಿ ಆಡಳಿತ ಮಾಡುತ್ತಿರುವುದೂ ಗೂಂಡಾ ಸರಕಾರ. ಇಂತಹ ಸರಕಾರದ ಶಾಸಕ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಅವರು ತಿಳಿಸಿದರು.

ರಾಹುಲ್ ಗಾಂಧಿ ಸಂವಿಧಾನಬದ್ಧವಾಗಿ ನೀಡಲಾಗಿರುವ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇದನ್ನು ಬಿಜೆಪಿ ಸಹಿಸಲಾಗದೇ ಅವರನ್ನು ಹತ್ತಿಕ್ಕಲು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ತೇಜೋವಧೆ ಮಾಡಲಾಗುತ್ತಿದೆ. ಆದರೆ ರಾಹುಲ್ ಗಾಂಧಿ ಅವರ ಧ್ವನಿ ಹತ್ತಿಕ್ಕಲು ಸಾಧ್ಯವಾಗಿಲ್ಲ. ದೇಶದ ಜನ ಕೂಡ ಇದನ್ನು ಗಮನಿಸಿ ಬಿಜೆಪಿಗೆ 240 ಸ್ಥಾನ ನೀಡಿ ಮೋದಿಗೆ ಮುಖಭಂಗ ಮಾಡಿದ್ದಾರೆ ಎಂದು ಖಂಡಿಸಿದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಮಾತನಾಡಿ, ಮನುವಾದಿ ಬಿಜೆಪಿ, ಆರೆಸ್ಸೆಸ್ ಹಾಗೂ ಅದರ ಮಿತ್ರ ಪಕ್ಷಗಳು ಸದಾ ಸಂವಿಧಾನ ವಿರೋಧಿಗಳಾಗಿವೆ. ಆರೆಸ್ಸೆಸ್ ಪ್ರಮುಖ ಹುದ್ದೆಯಲ್ಲಿ ದಲಿತರಿದ್ದಾರಾ? ಕಾಂಗ್ರೆಸ್ ಪಕ್ಷದಲ್ಲಿ ದಲಿತರಾದ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಅಧ್ಯಕ್ಷರಾಗಿದ್ದಾರೆ. ಇಂತಹ ಸಾವಿರಾರು ಉದಾಹರಣೆಗಳು ಕಾಂಗ್ರೆಸ್ ಪಕ್ಷದಲ್ಲಿವೆ ಎಂದರು.

ಶೋಷಿತರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾನತೆ ನೀಡುವ ಕೆಲಸ ಮಾಡಿರುವುದು ಕಾಂಗ್ರೆಸ್. ಇದನ್ನು ಆರೆಸ್ಸೆಸ್ ಎಂದಿಗೂ ಸಹಿಸುವುದಿಲ್ಲ. ಮೋದಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ತಿರುಚಿದ್ದರು. ಬಿಜೆಪಿಯ ಅಸಮಾನತೆ ಸಿದ್ಧಾಂತದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ನಾಗರಾಜ್ ಯಾದವ್, ಸೂರಜ್ ಹೆಗ್ಡೆ, ದೀಪಕ್ ತಿಮ್ಮಯ, ವಿನಯ್ ಕಾರ್ತಿಕ್, ನಾರಾಯಣ ಸ್ವಾಮಿ, ಅಬ್ದುಲ್ ವಾಜಿದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ಬಿಜೆಪಿ ಶಾಸಕ ಮುನಿರತ್ನ ದಲಿತರು, ಒಕ್ಕಲಿಗರು, ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಸ್ಥಾನಕ್ಕೆ ಗೌರವ ನೀಡದೇ ಸಮರ್ಥಿಸಿಕೊಂಡಿದ್ದಾರೆ. ಅವರ ನೈತಿಕತೆ ಎಷ್ಟರ ಮಟ್ಟಿಗೆ ಕುಸಿದಿದೆ ಇದು ಎಂಬುದಕ್ಕೆ ಸಾಕ್ಷಿ. ದಲಿತರು, ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಮುನಿರತ್ನ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ’

-ಜಿ.ಸಿ. ಚಂದ್ರಶೇಖರ್, ಕೆಪಿಸಿಸಿ ಕಾರ್ಯಾಧ್ಯಕ್ಷ


Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News