ವಕ್ಫ್ ಬೋರ್ಡ್‍ನಿಂದ ಬಡ ಮುಸ್ಲಿಂ ಕುಟುಂಬಗಳಿಗೆ ಮನೆ ನಿರ್ಮಾಣ : ಸಚಿವ ಝಮೀರ್ ಅಹ್ಮದ್

Update: 2024-09-18 14:37 GMT

ಕಲಬುರಗಿ : ರಾಜ್ಯದ ಪ್ರತಿ ತಾಲೂಕಿನಲ್ಲಿ ಮನೆ ಇಲ್ಲದ ಬಡ ಮುಸ್ಲಿಂ ಸಮುದಾಯದವರಿಗೆ ವಕ್ಫ್ ಬೋರ್ಡ್ ವತಿಯಿಂದಲೇ ವಸತಿ ಭಾಗ್ಯ ಕಲ್ಪಿಸುವ ಯೋಜನೆ ಪ್ರಸ್ತಾವನೆಯಲ್ಲಿದೆ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಬುಧವಾರ ನಗರದ ವಿಂಟೆಜ್ ಪ್ಯಾಲೇಸ್ ನಲ್ಲಿ ಆಯೋಜಿಸಿದ್ದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ವಕ್ಫ್ ಅದಾಲತ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸಮುದಾಯದಲ್ಲಿ ಅತ್ಯಂತ ಬಡವರಿದ್ದು ಅಂತಹ ವಸತಿ ರಹಿತರ ಸಮೀಕ್ಷೆ ನಡೆಸಿ ಅವರಿಗೆ ಕಡಿಮೆ ಬಾಡಿಗೆ ದರದಲ್ಲಿ ಮನೆ ನೀಡಲಾಗುವುದು. ಇದರಿಂದ ಮಂಡಳಿಗೂ ಆದಾಯ ಬರುತ್ತದೆ, ಸಮುದಾಯಕ್ಕೂ ಒಳಿತಾಗುತ್ತದೆ ಎಂದು ಹೇಳಿದರು.

ಇದಲ್ಲದೆ ಇದಲ್ಲದೇ, ಇಮಾಮ್ ಹಾಗೂ ಮುಅಝ್ಝಿನ್‌ ಗಳಿಗೆ ಬಾಡಿಗೆ ಆಧಾರದ ಮೇಲೆ ಮನೆ ಕಟ್ಟಿಕೊಡಲು ನಿರ್ಧರಿಸಲಾಗಿದೆ. ವಕ್ಫ್ ಬೊರ್ಡ್ ಸಮುದಾಯದ ಒಳಿತಿಗೆ ಶ್ರಮಿಸುತ್ತಿದ್ದು ತುರ್ತಾಗಿ ವೈದ್ಯಕೀಯ ನೆರವು ಪಡೆಯಲು ಅನುಕೂಲವಾಗುವಂತೆ ಜಿಲ್ಲೆಗೆ ಒಂದರಂತೆ ತಲಾ 40 ಲಕ್ಷ ರೂ. ವೆಚ್ಚದಲ್ಲಿ ಆ್ಯಂಬುಲೆನ್ಸ್ ನೀಡಲಾಗುವುದು. ಪ್ರತಿ ತಾಲೂಕಿಗೆ ಒಂದರಂತೆ ಫ್ರೀಜರ್ ನೀಡಲಾಗುವುದು ಎಂದು ಅವರು ತಿಳಿಸಿದರು.

ಕಾಂಪೌಂಡ್ ನಿರ್ಮಾಣ: ರಾಜ್ಯದಲ್ಲಿರುವ ವಕ್ಫ್ ಆಸ್ತಿ ಸಂರಕ್ಷಣೆಗೆ ವಕ್ಫ್ ಬೋರ್ಡ್ ಮುಂದಾಗಿದ್ದು, ಪ್ರತಿಯೊಂದು ವಕ್ಫ್ ಆಸ್ತಿ ಸುತ್ತಲೂ ವಕ್ಫ್ ಬೋರ್ಡ್ ವತಿಯಿಂದ ಕಾಂಪೌಂಡ್ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ, ವಕ್ಫ್ ಆಸ್ತಿಯನ್ನು ಗುರುತಿಸಲು ಅನುಕೂಲವಾಗುವಂತೆ ಹಸಿರು ಬಣ್ಣವನ್ನು ಲೇಪನ ಮಾಡಲಾಗುವುದು ಎಂದು ಅವರು ಹೇಳಿದರು.

ಅರ್ಜಿ ಸ್ವೀಕಾರ: ವಕ್ಫ್ ಅದಾಲತ್‍ನಲ್ಲಿ ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 368 ಅರ್ಜಿ ಸ್ವೀಕಾರ ಆಗಿದ್ದು ಆ ಪೈಕಿ ಒತ್ತುವರಿ ಸಂಬಂಧ 100, ಖಬರಸ್ಥಾನ ಕುರಿತ 55 ಹಾಗೂ ಇತರೆ 213 ಅರ್ಜಿ ಗಳು ಸಲ್ಲಿಕೆಯಾದವು. ಯಾದಗಿರಿ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 82 ಅರ್ಜಿ ಸ್ವೀಕೃತವಾಗಿದ್ದು ಆ ಪೈಕಿ ಒತ್ತುವರಿ ಸಂಬಂಧ 38, ಖಬರಸ್ಥಾನ ಕುರಿತ 33 ಹಾಗೂ ಇತರೆ 11 ಅರ್ಜಿ ಸ್ವೀಕಾರವಾದವು ಎಂದು ಅವರು ಹೇಳಿದರು.

ಇದುವರೆಗೆ ನಡೆಸಿದ ಐದು ಜಿಲ್ಲೆಗಳ ವಕ್ಫ್ ಅದಾಲತ್ ನಿಂದ 507 ಖಾತೆ ಆಗಿದೆ, 382 ಪ್ರಗತಿಯಲ್ಲಿದೆ. ಒಟ್ಟಾರೆ ಇಂದಿನಿ ಅದಾಲತ್‍ನಲ್ಲಿ 450 ಅರ್ಜಿಗಳ ಬಗ್ಗೆ ಗುರುವಾರ ಇಲ್ಲಿನ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡುವುದಾಗಿ ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ರಾಜ್ಯದಲ್ಲಿ 1.08 ಲಕ್ಷ ಎಕರೆ ವಕ್ಫ್ ಆಸ್ತಿ ಇದ್ದು, ಇದರಲ್ಲಿ 85 ಸಾವಿರ ಎಕರೆ ಪ್ರದೇಶ ಒತ್ತುವರಿಯಾಗಿದೆ. ಈ ಆಸ್ತಿಯನ್ನು ಮರಳಿ ವಕ್ಫ್ ಬೋರ್ಡ್‍ಗೆ ಪಡೆಯಲು ವಕ್ಫ್ ಅದಾಲತ್‍ಗಳನ್ನು ನಡೆಸಲಾಗುತ್ತಿದೆ. ಕಲಬುರಗಿಯಲ್ಲಿ ವಕ್ಫ್ ಆಸ್ತಿ 21,440 ಎಕರೆ ಇದ್ದು, 3,610 ಎಕರೆ ಒತ್ತುವರಿ ಆಗಿದೆ. ಯಾದಗಿರಿಯಲ್ಲಿ 6,194 ಎಕರೆ ಪೈಕಿ, 123 ಎಕರೆ ಒತ್ತುವರಿ ಆಗಿದೆ ಎಂದು ಝಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಅನ್ವರ್ ಬಾಷಾ, ರಾಜ್ಯದಲ್ಲಿ ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ಬೆಳಗಾವಿ, ಬೀದರ್, ಕಾರವಾರ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಯಲ್ಲಿ ವಕ್ಫ್ ಅದಾಲತ್ ಹಮ್ಮಿಕೊಂಡು ವಕ್ಫ್ ಆಸ್ತಿಗಳ ಸಂರಕ್ಷಣೆ ನಿಟ್ಟಿನಲ್ಲಿ ಖಾತಾ ಅಪಡೇಟ್, ಸರ್ವೇ, ಮುಟೇಷನ್ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದರು.

ಕಲಬುರಗಿ ಉತ್ತರ ಶಾಸಕಿ ಕನೀಝ್ ಫಾತಿಮಾ ಮಾತನಾಡಿ, ವಕ್ಫ್ ಆಸ್ತಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್ ಕಲಬುರಗಿಯಲ್ಲಿ ವಕ್ಫ್ ಅದಾಲತ್ ಆಯೋಜಿಸಿರುವುದು ಸ್ವಾಗತಾರ್ಹ. ಪ್ರತಿಯೊಬ್ಬರೂ ಅತ್ಯಂತ ಶಾಂತ ರೀತಿಯಲ್ಲಿ ತಮ್ಮ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಹೇಳಿದರು.

ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್ ಸಿ.ಇ.ಓ ಜಿಲಾನಿ ಮೊಕಾಶಿ, ಸದಸ್ಯ ಜಿ.ಯಾಖೂಬ್, ಕಲಬುರಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯದ್ ಹಬೀಬ್ ಸರ್ಮಸ್ತ್, ಯಾದಗಿರಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಝಹೀರುದ್ದೀನ್ ಸವೆರಾ, ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿ ಹಝ್ರತ್ ಅಲಿ ನದಾಫ್, ಯಾದಗಿರಿ ಜಿಲ್ಲಾ ವಕ್ಫ್ ಅಧಿಕಾರಿ ಝರೀನಾ ಬೇಗಮ್, ಮಾಜಿ ಮಹಾಪೌರ ಸೈಯದ್ ಅಹ್ಮದ್, ಯುವ ಮುಖಂಡ ಫರಾಝ್ ಉಲ್ ಇಸ್ಲಾಮ್, ಫಝಲ್ ಖಾನ್, ವಾಹಿದ್ ಅಲಿ ಫಾತೆಖಾನಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News