ಇಬ್ರಾಹೀಂ ಸುಲೈಮಾನ್ ಸೇಠ್ ನೈಜ ಜನನಾಯಕ : ಸಿ.ಎಂ.ಇಬ್ರಾಹೀಂ
ಬೆಂಗಳೂರು : ಆರು ದಶಕಗಳಿಗೂ ಹೆಚ್ಚು ಕಾಲ ರಾಷ್ಟ್ರ ರಾಜಕಾರಣದಲ್ಲಿದ್ದು, ನಲವತ್ತು ವರ್ಷಗಳ ಕಾಲ ಸಂಸತ್ತಿನಲ್ಲಿ ದುರ್ಬಲ ವರ್ಗಗಳು, ಅಲ್ಪಸಂಖ್ಯಾತರು, ದಲಿತರು, ದೀನದಲಿತರು ಮತ್ತು ಹಿಂದುಳಿದವರ ಪರವಾಗಿ ಹೋರಾಡಿದ ಇಂಡಿಯನ್ ನ್ಯಾಷನಲ್ ಲೀಗ್ ಸಂಸ್ಥಾಪಕ ಇಬ್ರಾಹೀಂ ಸುಲೈಮಾನ್ ಸೇಠ್ ಓರ್ವ ನೈಜ ಜನನಾಯಕ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಅಭಿಪ್ರಾಯಪಟ್ಟಿದ್ದಾರೆ.
ಇಬ್ರಾಹೀಂ ಸುಲೇಮಾನ್ ಸೇಠ್ ಅವರ 104ನೇ ಜನ್ಮದಿನದ ಅಂಗವಾಗಿ ನಗರದ ಕಾಮರಾಜ ರಸ್ತೆಯಲ್ಲಿರುವ ಕಚ್ಚಿ ಮೇಮನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಮೆಹಬೂಬ್ ಎ ಮಿಲ್ಲತ್ ಇಬ್ರಾಹೀಂ ಸುಲೈಮಾನ್ ಸೇಠ್ ಅವರ ಜೀವನ ಮತ್ತು ರಾಜಕೀಯ’ ರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
ಇಬ್ರಾಹೀಂ ಸುಲೈಮಾನ್ ಸೇಠ್ ಯಾವುದೇ ಧರ್ಮ, ಜಾತಿ, ಮತಗಳ ಭೇದವಿಲ್ಲದೆ ಸಮಾಜದ ಕಟ್ಟಕಡೆಯ ಜನರ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಪ್ರಥಮ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರು ಆದಿಯಾಗಿ ಎಲ್ಲ ಪ್ರಮುಖ ರಾಷ್ಟ್ರೀಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು, ಅಧಿಕಾರ, ಅಂತಸ್ತಿನ ಹಿಂದೆ ಹೋದವರಲ್ಲ ಎಂದು ಸಿ.ಎಂ.ಇಬ್ರಾಹೀಂ ಹೇಳಿದರು.
ನಾನು ಕೇಂದ್ರದಲ್ಲಿ ಸಚಿವನಾಗಿದ್ದ ಸಂದರ್ಭದಲ್ಲಿ ಅವರನ್ನು ಒಮ್ಮೆ ಭೇಟಿಯಾಗಿದ್ದೆ. ಆಗ ನಿಮಗಾಗಿ ಏನಾದರೂ ಮಾಡಬೇಕಿದ್ದರೆ ಹೇಳಿ ಎಂದು ಕೇಳಿದೆ. ಅದಕ್ಕೆ ಅವರು ‘ನೆಹರು ಜೊತೆ ದಶಕಗಳ ಕಾಲ ಸುದೀರ್ಘ ಒಡನಾಟ ಇದ್ದಾಗಲೇ ನಾನು ನನಗಾಗಿ ಏನು ಬಯಸಲಿಲ್ಲ. ಇನ್ನೂ ನಿಮ್ಮ ಬಳಿ ಏನು ಕೇಳಲಿ’ ಎಂದು ಉತ್ತರಿಸಿದ್ದರು. ಇಂದಿನ ಕಾಲದ ಜನಪ್ರತಿನಿಧಿಗಳಿಗೆ ಇಬ್ರಾಹೀಂ ಸುಲೈಮಾನ್ ಸೇಠ್ ಆದರ್ಶವಾಗಬೇಕು ಎಂದು ಅವರು ತಿಳಿಸಿದರು.
ಸಮಾವೇಶದಲ್ಲಿ ಐಎನ್‍ಎಲ್ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಮುಹಮ್ಮದ್ ಸುಲೈಮಾನ್, ಕೇರಳದ ಸಂಸದರಾದ ಇ.ಟಿ.ಮುಹಮ್ಮದ್ ಬಶೀರ್, ಕಾಂ.ಜಾನ್ ಬ್ರಿಟಾಸ್, ಶಾಸಕ ಕೆ.ಟಿ.ಜಲೀಲ್, ಐಎನ್‍ಎಲ್ ರಾಜ್ಯಾಧ್ಯಕ್ಷ ಅಹ್ಮದ್ ದೇವರ್ ಕೋವಿಲ್, ಪ್ರಧಾನ ಕಾರ್ಯದರ್ಶಿ ಖಾಸೀಂ ಇರಿಕ್ಕೂರ್, ಐಎನ್‍ಎಲ್ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ತಸ್ನೀಮ್ ಇಬ್ರಾಹೀಂ, ಐಎನ್‍ಎಲ್ ರಾಷ್ಟ್ರೀಯ ಕಾರ್ಯದರ್ಶಿ ಸಿರಾಜ್ ಸೇಠ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.