ಮುಡಾ ಪ್ರಕರಣದ ಸಿಬಿಐ ತನಿಖೆ ಕೋರಿ ಅರ್ಜಿ: ಕೇಂದ್ರ, ರಾಜ್ಯ ಸರಕಾರ, ಸಿದ್ದರಾಮಯ್ಯ, ಮತ್ತವರ ಪತ್ನಿಗೆ ಹೈಕೋರ್ಟ್ ನೋಟಿಸ್

Update: 2024-11-05 07:06 GMT

Photo: wikipedia

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆದೇಶಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ಸಂಬಂಧ ರಾಜ್ಯ ಹೈಕೋರ್ಟ್ ಕೆಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದಾಖಲಿಸಿರುವ ರಿಟ್ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದ್ದು, ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿದೆ.

ಅಲ್ಲದೆ, ರಾಜ್ಯ ಗೃಹ ಸಚಿವಾಲಯ, ಗೃಹ ಇಲಾಖೆ, ಸಿಬಿಐ, ಮೈಸೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ ಸೇರಿದಂತೆ ಒಟ್ಟು 12 ಮಂದಿಗೂ ನೋಟಿಸ್ ಜಾರಿ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪೀಠ, ಇದೀಗ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿಲ್ಲವೇ ಎಂದು ಪ್ರಶ್ನಿಸಿತು. ಆಗ, ಅರ್ಜಿದಾರ ಪರ ವಕೀಲರು, ತನಿಖೆ ಸಾರ್ವಜನಿಕ ವಿಶ್ವಾಸವನ್ನು ಹುಟ್ಟು ಹಾಕುವಂತಿರಬೇಕು. ಅದನ್ನು ಮಾಡಲಾಗುತ್ತಿಲ್ಲ. ವಾದ ಆಲಿಸಿದ ಪೀಠ, ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಜತೆಗೆ, ನವೆಂಬರ್ 26ರ ವರೆಗೂ ನಡೆದಿರುವ ತನಿಖಾ ವರದಿಯನ್ನು ನ್ಯಾಯಪೀಠದ ಮುಂದೆ ಪ್ರಸ್ತುತ ಪಡಿಸಬೇಕು ಎಂದು ನ್ಯಾಯಪೀಠ ಇದೇ ವೇಳೆ ನಿರ್ದೇಶನ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News