ಒಡೆತನದ ಆಸ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ವಿಚಾರ | ಸಚಿವ ದಿನೇಶ್ ಗುಂಡೂರಾವ್ ಹೈಕೋರ್ಟ್ ಮೊರೆ
ಬೆಂಗಳೂರು : ತಮ್ಮ ಒಡೆತನದ ಆಸ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಲು ನೆಲ ಬಾಡಿಗೆ, ಪರವಾನಿಗೆ ಶುಲ್ಕ, ಕೆರೆ ಜೀರ್ಣೋದ್ಧಾರ ಶುಲ್ಕ ಸೇರಿದಂತೆ 41 ಲಕ್ಷ ರೂ.ಗೂ ಹೆಚ್ಚು ಮೊತ್ತದ ವಿವಿಧ ಬಗೆಯ 16ಕ್ಕೂ ಹೆಚ್ಚು ತೆರಿಗೆ, ಶುಲ್ಕಗಳನ್ನು ಪಾವತಿಸುವಂತೆ ಬಿಬಿಎಂಪಿ ಜಾರಿಗೊಳಿಸಿರುವ ಡಿಮ್ಯಾಂಡ್ ನೋಟಿಸ್ ಪ್ರಶ್ನಿಸಿ ಸಚಿವ ದಿನೇಶ್ ಗುಂಡೂರಾವ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಹಾಗೂ ಅವರ ಪತ್ನಿ ತಬಸ್ಸುಮ್ ಗುಂಡೂರಾವ್ ಸಲ್ಲಿಸಿರುವ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ನಗರಾಭಿವೃದ್ಧಿ ಇಲಾಖೆ, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನಾ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ, ನಗರಾ ಯೋಜನಾ ಸಹಾಯಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.