ಮಾನವ ಸಮೂಹ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಪ್ರವಾದಿ ಮುಹಮ್ಮದ್ (ಸ)ರ ಶಿಕ್ಷಣ, ಬೋಧನೆಯಲ್ಲಿ ಅಡಕವಾಗಿವೆ: ಅಕ್ಬರ್ ಅಲಿ ಉಡುಪಿ
ಬೆಂಗಳೂರು: ಇಂದು ಮಾನವ ಸಮೂಹ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಪ್ರವಾದಿ ಮುಹಮ್ಮದ್ (ಸ) ಅವರ ಶಿಕ್ಷಣ ಹಾಗೂ ಬೋಧನೆಯಲ್ಲಿ ಅಡಕವಾಗಿವೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಅವರು ಹೇಳಿದರು.
ಅವರು ಇತ್ತೀಚೆಗೆ ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ರೋಡ್ ವತಿಯಿಂದ ವಾಲ್ಮೀಕಿ ನಗರದಲ್ಲಿರುವ ಇಸ್ಲಾಮಿಕ್ ಸೆಂಟರ್ ನಲ್ಲಿ "ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ" ಎಂಬ ವಿಷಯದ ಕುರಿತು ಹಮ್ಮಿಕೊಂಡ ವಿಚಾರಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದರು.
'ಹಿಂದೂ ಮುಸ್ಲಿಂ ಪರಸ್ಪರ ವೈರಿಗಳೆಂದು ಕೆಲವರು ಹೇಳುತ್ತಾರೆ ಆದರೆ ನಿಜವಾಗಿ ಅಶ್ಲೀಲತೆ, ಮದ್ಯಪಾನ, ಬಡ್ಡಿ, ಲಂಚ ಎಂಬಂತಹ ಕೆಡುಕುಗಳೇ ವಾಸ್ತವದಲ್ಲಿ ನಮ್ಮೆಲ್ಲರ ವೈರಿಗಳು. ಇವುಗಳನ್ನು ಸಮಾಜದಿಂದ ಹೊಡೆದು ಓಡಿಸುವಂತಹ ಕೆಲಸವಾಗಬೇಕು. ಪ್ರವಾದಿ ಮುಹಮ್ಮದ್ (ಸ) ಅವರು ಕೇವಲ ಮುಸ್ಲಿಮರ ಪ್ರವಾದಿ ಮಾತ್ರವಲ್ಲ ಅವರು ಈ ಜಗತ್ತಿನಲ್ಲಿರುವ ಎಲ್ಲ ಮನುಷ್ಯರ ಪ್ರವಾದಿಯಾಗಿದ್ದಾರೆ. ಅವರ ಸಂದೇಶವು ಸಾರ್ವಕಾಲಿಕವಾಗಿದೆ, ಸಾರ್ವತ್ರಿಕವಾಗಿದೆ, ಅಧಿಕೃತವಾಗಿದೆ ಮತ್ತು ಪರಿಪೂರ್ಣವಾಗಿದೆ ಎಂದು ಅಕ್ಬರ್ ಅಲಿ ಉಡುಪಿ ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಪ್ರಾಸ್ತಾವಿಕ ಭಾಷಣ ಮಾಡಿದರು.
ಇಮ್ರಾನ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ನಸ್ರುಲ್ಲಾಹ್ ಧನ್ಯವಾದಗಳ ಅರ್ಪಿಸಿದರು. ಈ ಸಂದರ್ಭ ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನಿಯ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಗುಡಿಹಾಳ, ಬೆಂಗಳೂರ ನಗರ ಕಾರ್ಯದರ್ಶಿ ಡಾ. ಸಯ್ಯದ್ ಫಕ್ರುದ್ದೀನ್ ಖಾಝಿ ಉಪಸ್ಥಿತರಿದ್ದರು.