ಕೇಂದ್ರ ಸಂಪುಟದಿಂದ ಪ್ರಹ್ಲಾದ್ ಜೋಶಿ ವಜಾಕ್ಕೆ ಕಾಂಗ್ರೆಸ್ ಆಗ್ರಹ

Update: 2024-10-18 14:50 GMT

ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಅವರ ಸಹೋದರ-ಸಹೋದರಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 2ಕೋಟಿ ರೂ. ಹಣ ಪಡೆದು ವಂಚಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕೆಪಿಸಿಸಿ ವತಿಯಿಂದ ಶುಕ್ರವಾರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ನಗರದ ಕೆಪಿಸಿಸಿ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಪ್ರಧಾನಿ ಮೋದಿಯವರೆ ತಮ್ಮ ಸಹೋದ್ಯೋಗಿ ಪ್ರಹ್ಲಾದ್ ಜೋಶಿ ಚುನಾವಣೆ ಹೆಸರಿನಲ್ಲಿ ನಿಮ್ಮ ಹಾಗೂ ಗೃಹ ಸಚಿವರ ಹೆಸರನ್ನು ಬಳಸಿಕೊಂಡು ಅವರ ಕುಟುಂಬದ ಸದಸ್ಯರು ಹಣ ಪಡೆದಿರುವ ಹಿನ್ನೆಲೆಯಲ್ಲಿ ಅವರನ್ನು ಸಂಪುಟದಿಂದ ವಜಾಗೊಳಿಸಿ ಎಂದು ಆಗ್ರಹಿಸಿದರು.

‘ಭ್ರಷ್ಟಾಚಾರ ರಹಿತ ಆಡಳಿತ’ ಎಂದು ಹೇಳಿಕೊಳ್ಳುವ ತಾವು ಹಾಗೂ ತಮ್ಮ ಬೆನ್ನನ್ನು ತಾವೆ ತಟ್ಟಿಕೊಳ್ಳುವ ನೀವು, ಲೋಕಸಭಾ ಚುನಾವಣೆ ಟಿಕೆಟ್ ಕೊಡಿಸುವ ನೆಪದಲ್ಲಿ ವಂಚನೆ ಮಾಡಿರುವ ಪ್ರಹ್ಲಾದ್ ಜೋಶಿ ಮತ್ತವರ ಕುಟುಂಬದ ವಿರುದ್ಧ ಏಕೆ ಕ್ರಮಕ್ಕೆ ಒತ್ತಾಯಿಸಿಲ್ಲ. ಅವರು ನಡೆಸಿರುವ ಭ್ರಷ್ಟಾಚಾರ ಅಕ್ರಮದ ಬಗ್ಗೆ ತಮಗೆ ಮಾಹಿತಿ ಇಲ್ಲವೇ? ಅವರ ಸಹೋದರ-ಸಹೋದರಿ 2 ಕೋಟಿ ರೂ.ಹಣ ಪಡೆದರು ಅವರ ವಿರುದ್ಧ ಧ್ವನಿ ಎತ್ತುವುದಿಲ್ಲ ಎಂದರೆ ಭ್ರಷ್ಟಾಚಾರಕ್ಕೆ ನೀವೇ ಬೆಂಬಲಿಸುತ್ತಿದ್ದೀರಿ ಎಂಬುದು ಈಗ ಬಹಿರಂಗವಾಗಿದೆ ಎಂದು ಮನೋಹರ್ ಟೀಕೆ ಮಾಡಿದರು.

ಬಿಜೆಪಿ ಎಂದರೆ ಭ್ರಷ್ಟಾಚಾರದ ಪಕ್ಷ ಎಂಬುದು ಹಿಂದಿನಿಂದಲೂ ಇತ್ತು. ಈಗ ಅದು ಮತ್ತೊಮ್ಮೆ ಸಾಬೀತಾಗಿದೆ. ಕೇಂದ್ರ ಸಚಿವ ಜೋಶಿ ಪ್ರಾಮಾಣಿಕ ವ್ಯಕ್ತಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ಕುಟುಂಬದ ಸದಸ್ಯರು ಮಾಡಿರುವ ಇಂತಹ ಭ್ರಷ್ಟಾಚಾರದ ಬಗ್ಗೆ ಐಟಿ, ಈಡಿ, ಸಿಬಿಐ ಮಾತನಾಡದೆ, ಏಕೆ ನಿದ್ರಿಸುತ್ತಿದೆ ಎಂಬುದು ಜನತೆಗೆ ಇಲಾಖೆಯ ಮುಖ್ಯಸ್ಥರು ತಿಳಿಸಬೇಕು. ಕೇವಲ ವಿಪಕ್ಷಗಳ ವಿರುದ್ಧ ಮಾತ್ರ ತನಿಖೆ ನಡೆಸುತ್ತಿರುವ ಮೋದಿಯವರೆ, ನಿಮ್ಮ ಸಹೋದ್ಯೋಗಿ ಭ್ರಷ್ಟ ಮಂತ್ರಿಗಳು ಹಾಗೂ ಕುಟುಂಬದವರು ಮಾಡಿರುವ ಭ್ರಷ್ಟಾಚಾರದಲ್ಲಿ ನಿಮ್ಮ ಪಾಲು ಎಷ್ಟು? ಎಂಬುದನ್ನು ತಿಳಿಸಬೇಕು ಎಂದು ಅವರು ಗುಡುಗಿದರು.

ಪ್ರಹ್ಲಾದ್ ಜೋಶಿ ಕುಟುಂಬದ ವಿರುದ್ಧ ಅಕ್ರಮ ಹಣ ಪಡೆದಿರುವ ಬಗ್ಗೆ ದೂರು ದಾಖಲಾಗಿದೆ. ಆ ದೂರಿನಲ್ಲಿ ಪ್ರಧಾನ ಮಂತ್ರಿಗಳಾದ ತಮ್ಮ ಹೆಸರು ಹಾಗೂ ಗೃಹ ಸಚಿವರ ಹೆಸರನ್ನ ಪ್ರಸ್ತಾಪಿಸಲಾಗಿದೆ. ಆದ್ದರಿಂದ ಈ ಕೂಡಲೆ ರಾಜೀನಾಮೆ ನೀಡಬೇಕು. ಈ ತನಿಖೆಗೆ ಸಹಕರಿಸಲು ಪ್ರಹ್ಲಾದ್ ಜೋಶಿ ಅವರಿಗೆ ಸೂಚಿಸಬೇಕೆಂದು ಮನೋಹರ್ ಆಗ್ರಹಿಸಿದರು.

ಬೆಂಗಳೂರು ಪಶ್ಚಿಮ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಪುಟ್ಟರಾಜು, ಉಮೇಶ್, ಹೇಮರಾಜ್, ಕುಶಾಲ್ ಹರುವೇಗೌಡ, ಚಂದ್ರಶೇಖರ್, ವಾಸು, ನವೀನ್ ಸಾಯಿ, ಗಜ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News