ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ವಂಚನೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ : ಬಿ.ದಯಾನಂದ್
ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಬಿಜಾಪುರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ.ವಂಚನೆ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆರೋಪಿಗಳು ಬಿಜೆಪಿ ಟಿಕೆಟ್ ಕೊಡಿಸುವುಸಾಗಿ ಆಮಿಷವೊಡ್ಡಿ 2ಕೋಟಿ ರೂ.ಪಡೆದುಕೊಂಡು ಟಿಕೆಟ್ ಕೊಡಿಸದೆ ಹಾಗೂ ಹಣವನ್ನೂ ಹಿಂದಿರುಗಿಸದೆ ವಂಚನೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆ ಎಂದರು.
ಈ ಬಗ್ಗೆ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸಹೋದರ-ಸಹೋದರಿ ಸೇರಿದಂತೆ ಮೂವರು ಆರೋಪಿಗಳು ಹಂತ ಹಂತವಾಗಿ 2 ಕೋಟಿ ರೂ. ಹಣ ಪಡೆದುಕೊಂಡಿರುವುದಾಗಿ ಗೊತ್ತಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬಿ.ದಯಾನಂದ್ ಹೇಳಿದರು.
ರಾಜ್ಯಾತಿಥ್ಯ ಪ್ರಕರಣದ ತನಿಖೆ ಅಂತಿಮ ಹಂತ: ‘ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ನಟ ದರ್ಶನ್ ಹಾಗೂ ಇನ್ನಿತರರಿಗೆ ರಾಜ್ಯಾತಿಥ್ಯ ನೀಡಲಾಗಿದ್ದ ಬಗ್ಗೆ ದಾಖಲಾಗಿರುವ ಮೂರು ಪ್ರಕರಣಗಳ ತನಿಖೆ ಅಂತಿಮ ಹಂತದಲ್ಲಿದೆ. ಈಗಾಗಲೇ ಚಾರ್ಜ್‍ಶೀಟ್ ಸಿದ್ಧವಾಗಿದ್ದು, ಸ್ಕ್ರೂಟನಿ ನಡೆಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.