ಬೆಂಗಳೂರು | ನಕಲಿ ಆರ್ಡರ್ ಬುಕ್ ಮಾಡಿ ಲಾಜಿಸ್ಟಿಕ್ ಕಂಪೆನಿಗಳಿಗೆ ವಂಚನೆ : ನಾಲ್ವರ ಸೆರೆ

Update: 2024-10-18 16:44 GMT

ಬೆಂಗಳೂರು : ನಕಲಿ ಆರ್ಡರ್ ಬುಕ್ ಮಾಡಿ, ಕ್ಯಾನ್ಸಲ್ ಮಾಡುವ ಮೂಲಕ ಆನ್‍ಲೈನ್ ಲಾಜಿಸ್ಟಿಕ್ ಕಂಪೆನಿಗಳಿಗೆ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಶ್ರೇಯಸ್(29), ಕೌಶಿಕ್(26), ರಂಗನಾಥ್(26) ಹಾಗೂ ಆನಂದ್ ಕುಮಾರ್(30) ಎಂಬುವರು ಬಂಧಿತರು ಎಂದು ಗುರುತಿಸಲಾಗಿದೆ.

ಪೋರ್ಟರ್ ಲಾಜಿಸ್ಟಿಕ್ ಅಪ್ಲಿಕೇಷನ್‍ನಲ್ಲಿ ಗ್ರಾಹಕರು ಹಾಗೂ ಚಾಲಕರ ಹೆಸರಿನಲ್ಲಿ ತಾವೇ ನಕಲಿ ಐಡಿಗಳನ್ನು ಸೃಷ್ಟಿಸುತ್ತಿದ್ದ ಆರೋಪಿಗಳು, ದೂರದ ಸ್ಥಳಗಳಿಗೆ ಆರ್ಡರ್ ಪ್ಲೇಸ್ ಮಾಡುವ ಮೂಲಕ ಚಾಲಕನ ವ್ಯಾಲೆಟ್‍ಗೆ ಹಣ ಪಾವತಿಸುತ್ತಿದ್ದರು. ವ್ಯಾಲೆಟ್‍ಗೆ ಪಾವತಿಸಿದ ಹಣವನ್ನು ತಕ್ಷಣವೇ ಪುನಃ ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದರು. ನಂತರ Geo Spoofing ವಿಪಿಎನ್ ಬಳಸಿಕೊಂಡು ಲೊಕೇಷನ್ ಬದಲಿಸಿ ಚಾಲಕನ ಐಡಿಯಿಂದ ಆರ್ಡರ್ ಮುಕ್ತಾಯಗೊಂಡಿರುವಂತೆ ಬಿಂಬಿಸುತ್ತಿದ್ದರು. ಎಂದು ತಿಳಿದುಬಂದಿದೆ.

ಮತ್ತೊಂದೆಡೆ, ಗ್ರಾಹಕರ ಐಡಿಯಿಂದ ಆರ್ಡರ್ ಕ್ಯಾನ್ಸಲ್ ಆಗಿರುವುದಾಗಿ ಬಿಂಬಿಸಿ, ರಿಫಂಡ್ ಸಹ ಪಡೆದುಕೊಳ್ಳುತ್ತಿದ್ದರು. ಇದೇ ರೀತಿ 8 ತಿಂಗಳಿಂದ ಒಟ್ಟು 90 ಲಕ್ಷ ರೂ. ನಷ್ಟವಾಗಿರುವುದನ್ನು ಮನಗಂಡ ಪೋರ್ಟರ್ ಕಂಪೆನಿಯ ಪ್ರತಿನಿಧಿಗಳು ಬೆಂಗಳೂರಿನ ಆಗ್ನೆಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಪೋರ್ಟರ್ ಕಂಪೆನಿಯೊಂದಿಗೆ ಲಗತ್ತಿಸಿದ ನಂಬರ್ ಹಾಗೂ ಮತ್ತಿತರರ ತಾಂತ್ರಿಕ ಮಾಹಿತಿ ಆಧರಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರಿನಲ್ಲಿದ್ದುಕೊಂಡೇ Geo Spoofing ಮುಖಾಂತರ ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲೂ ಸಹ ಇದೇ ರೀತಿ ಪೋರ್ಟರ್ ಕಂಪೆನಿಗೆ ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.

ಅಲ್ಲದೆ, ಕೃತ್ಯಕ್ಕೆ ತಮ್ಮ ಸ್ನೇಹಿತರ ಮತ್ತು ಸಂಬಂಧಿಕರ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡಿದ್ದ ಆರೋಪಿಗಳು ವಂಚಿಸಿದ ಹಣವನ್ನು ಮನೆ ನಿರ್ಮಾಣ, ವಿಲಾಸಿ ಜೀವನ ಮತ್ತು ಸಾಲ ತೀರಿಸಿಕೊಳ್ಳಲು ಬಳಸಿಕೊಂಡಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News