ರಾಜ್ಯದ 100 ಮುಸ್ಲಿಮ್ ಮಹಿಳಾ ಸಾಧಕಿಯರಿಗೆ ಸನ್ಮಾನ ಸಮಾರಂಭ

ಬೆಂಗಳೂರು : ಅಧಿಕೃತ ದಾಖಲೆಗಳ ಮೂಲಕ ವಿಶ್ವಕ್ಕೆ ಭಾರತೀಯ ಮುಸ್ಲಿಮ್ ಮಹಿಳೆಯರ ನೈಜ ಚಿತ್ರಣವನ್ನು ಪರಿಚಯಿಸುವ ಸಮಯ ಬಂದಿದೆ ಎಂದು ಕರ್ನಾಟಕ ರೈಸಿಂಗ್ ಬಿಯಾಂಡ್ ದ ಸೀಲಿಂಗ್ ಚಳವಳಿಯ ಸಂಚಾಲಕಿ ಝೋಯಾ ಫತ್ಹೇಅಲಿ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಅಲ್ ಅಮೀನ್ ಎಜುಕೇಶನಲ್ ಸೊಸೈಟಿ ವತಿಯಿಂದ ಕರ್ನಾಟಕ ರೈಸಿಂಗ್ ಬಿಯಾಂಡ್ ದ ಸೀಲಿಂಗ್ (ಕೆ. ಆರ್.ಬಿ.ಟಿ.ಸಿ)ಗೆ ಆಯ್ಕೆಯಾಗಿರುವ ರಾಜ್ಯದ 100 ಮುಸ್ಲಿಮ್ ಮಹಿಳಾ ಸಾಧಕಿಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ರಾಜ್ಯದಲ್ಲಿ 15 ವಿವಿಧ ವಲಯಗಳಿಂದ 100 ಮಂದಿ ಮುಸ್ಲಿಮ್ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರ ತಂಡ ರಚನೆ ಮಾಡುತ್ತಿದ್ದೇವೆ. ಆ ಸಾಧಕಿಯರು ಈ ಚಳವಳಿಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ಅವರು ಹೇಳಿದರು.
2020ರಲ್ಲಿ ಉತ್ತರ ಪ್ರದೇಶದಲ್ಲಿ ಈ ಚಳವಳಿಯನ್ನು ಆರಂಭಿಸಲಾಯಿತು. ಆನಂತರ, ಕೇರಳ, ಪಶ್ಚಿಮ ಬಂಗಾಳ, ದಿಲ್ಲಿ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಈಗ ಕರ್ನಾಟಕದಲ್ಲಿಯೂ 100 ಮಂದಿ ಮಹಿಳಾ ಸಾಧಕಿಯರನ್ನು ಗುರುತಿಸಿದ್ದೇವೆ. ಉತ್ತರ ಪ್ರದೇಶದಲ್ಲಿ 200 ಮಂದಿಯ ತಂಡವಿದೆ ಎಂದು ಝೋಯಾ ಫತ್ಹೇಅಲಿ ತಿಳಿಸಿದರು.
ಪ್ರಮುಖವಾಗಿ 18-29 ವಯೋಮಾನದ ಯುವತಿಯರಿಗಾಗಿ ಮಾರ್ಗದರ್ಶನ ಕಾರ್ಯಕ್ರಮ ವನ್ನು ಆಯೋಜಿಸಲಾಗುವುದು. ಇದರಲ್ಲಿ ಯಾವುದೇ ಎಲ್ಲಾ ಧರ್ಮೀಯರಿಗೂ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು. ಮುಸ್ಲಿಮ್ ಮಹಿಳೆಯರು ಬರೆದಿರುವ ಪುಸ್ತಕಗಳ ಗ್ರಂಥಾಲಯ ಸ್ಥಾಪನೆ ಮಾಡುವ ಉದ್ದೇಶವಿದೆ. ಸದ್ಯ ಅವರ ಪುಸ್ತಕಗಳನ್ನು ವರ್ಚುವಲ್ ರೂಪದಲ್ಲಿ ಇರಿಸಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮುಸ್ಲಿಮ್ ಮಹಿಳೆಯರ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳು ಉತ್ತಮವಾಗಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಿಐಡಿ ವಿಭಾಗದ ಡಿಜಿಪಿ ಡಾ.ಎಂ.ಎ.ಸಲೀಮ್ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ತಮ್ಮ ತ್ಯಾಗ, ಕಠಿಣ ಪರಿಶ್ರಮದ ಮೂಲಕ ಸಾಧನೆಗಳನ್ನು ಮಾಡುತ್ತಿದ್ದಾರೆ. ಇಂದು ಇಲ್ಲಿ ನೆರೆದಿರುವ ಮಹಿಳೆಯರು ಎಲ್ಲರಿಗೂ ಸ್ಫೂರ್ತಿ ಆಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಬಿಲ್ಕೀಸ್ ಬಾನು, ರಾಜ್ಯ ಮಾಧ್ಯಮ ಅಕಾಡಮಿ ಅಧ್ಯಕ್ಷೆ ಆಯಿಷಾ ಖಾನಂ, ಲೇಖಕಿ ಕೆ.ಶರೀಫಾ, ಐಪಿಎಸ್ ಅಧಿಕಾರಿ ಸಾರಾ ಫಾತಿಮಾ, ಅಲ್ ಅಮೀನ್ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ಶಾಕಿರಾ ಖಾನಂ ಸೇರಿದಂತೆ ನೂರು ಮಂದಿ ಸಾಧಕಿಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಅಮೀನ್ ಎಜುಕೇಷನಲ್ ಸೊಸೈಟಿ ಅಧ್ಯಕ್ಷ ಉಮರ್ ಇಸ್ಮಾಯಿಲ್ ಖಾನ್ ವಹಿಸಿದ್ದರು. ಕಾರ್ಯದರ್ಶಿ ಝುಬೇರ್ ಅನ್ವರ್ ಸೇಠ್ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ನಿಖ್ಖತ್ ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಾಂಶುಪಾಲೆ ಡಾ.ಮುಬೀನ್ ಸ್ವಾಗತಿಸಿದರು. ಡಾ.ಜಾಕ್ವೆಲಿನ್ ವಂದನಾರ್ಪಣೆಗೈದರು.
ಮುಸ್ಲಿಮ್ ಮಹಿಳೆಯರು ಕೇವಲ ಮನೆ, ಕುಟುಂಬಕ್ಕೆ ಮಾತ್ರ ಸೀಮಿತ ಎಂಬ ಕಲ್ಪನೆಯಿದೆ. ಇಂತಹ ಕಾರ್ಯಕ್ರಮ, ಚಳವಳಿ ಮೂಲಕ ಸಮಾಜಕ್ಕೆ ಮುಸ್ಲಿಮ್ ಮಹಿಳೆಯರಲ್ಲೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಸಾಮರ್ಥ್ಯವಿದೆ ಎಂಬುದನ್ನು ಜಗತ್ತಿಗೆ ತಿಳಿಸಬಹುದು. ಅಲ್ಲದೇ, ಮುಂದಿನ ಪೀಳಿಗೆಗೂ ಇದು ಸ್ಫೂರ್ತಿ ಆಗುತ್ತದೆ.
-ಆಯಿಷಾ ಖಾನಂ, ರಾಜ್ಯ ಮಾಧ್ಯಮ ಅಕಾಡಮಿಯ ಅಧ್ಯಕ್ಷೆ