ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಪ್ರಕರಣ | ಮಾಜಿ ಶಾಸಕ ಪ್ರೀತಂ ಗೌಡ ಆಪ್ತರು ಎಸ್‌ಐಟಿ ವಶಕ್ಕೆ

Update: 2024-05-12 15:55 GMT

ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣ ಸಂಬಂಧ ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಆಪ್ತರು ಎನ್ನಲಾದ ಇಬ್ಬರನ್ನು ವಿಶೇಷ ತನಿಖಾ ದಳ(ಎಸ್‌ಐಟಿ) ಅಧಿಕಾರಿಗಳು ರವಿವಾರ ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಅಶ್ಲೀಲ ವಿಡಿಯೊ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತ್ ಮತ್ತು ಚೇತನ್ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಂಧಿತರ ಪೈಕಿ ಲಿಖಿತ್ ಎಂಬಾತ ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಆಪ್ತ ಎನ್ನಲಾಗಿದ್ದು, ಚೇತನ್ ಸಹ ಅವರದ್ದೇ ಕಚೇರಿಯ ಸಿಬ್ಬಂದಿ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಹಾಸನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳ ತಂಡ ಅಶ್ಲೀಲ ವಿಡಿಯೋಗಳನ್ನು ಹರಿಬಿಟ್ಟವರನ್ನು ವಶಕ್ಕೆ ಪಡೆಯುತ್ತಿದೆ. ಸದ್ಯ ಅಧಿಕಾರಿಗಳು ಪ್ರೀತಂ ಗೌಡ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಹಾಗೂ ಲಿಖಿತ್‍ನನ್ನು ಬಂಧಿಸಿದ್ದಾರೆ. ಮತ್ತೊಂದೆಡೆ, ಹಾಸನದ ಸೈಬರ್ ಕ್ರೈಂ ಠಾಣೆಯಲ್ಲಿ ಇಬ್ಬರ ವಿಚಾರಣೆ ನಡೆಸಲಾಗುತ್ತಿದ್ದು, ನವೀನ್ ಗೌಡ ಮತ್ತು ಪುಟ್ಟರಾಜು ಎಂಬ ಮತ್ತಿಬ್ಬರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೊಗಳನ್ನು ಹಾಸನ ಜಿಲ್ಲೆಯಲ್ಲಿ ವೈರಲ್ ಮಾಡಲಾಗುತ್ತಿದೆ ಎಂದು ಎಪ್ರಿಲ್ 23ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂತರ, ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದ ಹಿನ್ನೆಲೆ ಎಸ್‌ಐಟಿ ತನಿಖಾ ತಂಡ ರಚನೆ ಮಾಡಲಾಯಿತು.

ಆರೋಪಿ ನವೀನ್ ಗೌಡ ಫೇಸ್‍ಬುಕ್ ಪೋಸ್ಟ್‌ ವೈರಲ್

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಜೆಡಿಎಸ್‍ನ ಮತ್ತೋರ್ವ ಶಾಸಕನ ಹೆಸರು ತಳುಕು ಹಾಕಿಕೊಂಡಿದೆ. ಈ ಕುರಿತಾಗಿ ಆರೋಪಿ ನವೀನ್ ಗೌಡ ಫೇಸ್‍ಬುಕ್ ಖಾತೆಯಿಂದ ಸಂದೇಶವೊಂದು ವೈರಲ್ ಆಗಿದೆ.

ನನಗೆ ಎಪ್ರಿಲ್ 20ರಂದು ಪೆನ್‍ಡ್ರೈವ್ ಸಿಕ್ಕಿತ್ತು. ಪೆನ್‍ಡ್ರೈವ್ ಅನ್ನು ಅರಕಲಗೂಡು ಶಾಸಕ ಎ.ಮಂಜುಗೆ ಕೊಟ್ಟಿದ್ದೆ. ಎಮಾಜಿ ಸಿಎಂ ಕುಮಾರಸ್ವಾಮಿ ಹೇಳಿದಂತೆ ವಿಡಿಯೋ ವೈರಲ್ ಹಿಂದೆ ಮಹಾನಾಯಕ ಅರಕಲಗೂಡು ಶಾಸಕರೇ ಇರಬಹುದೆಂದು ಸಂದೇಶದಲ್ಲಿ ಉಲ್ಲೇಖ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ವಿದೇಶಕ್ಕೆ ಎಸ್‌ಐಟಿ ಹೋಗಲ್ಲ: ‘ಹಾಸನದ ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಲು ವಿಶೇಷ ತನಿಖಾ ದಳದ ಅಧಿಕಾರಿಗಳು ವಿದೇಶಕ್ಕೆ ತೆರಳುವ ಅವಕಾಶ ಇಲ್ಲ. ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಇಂಟರ್ ಪೋಲ್ ಸಂಸ್ಥೆಯವರು ಪ್ರಜ್ವಲ್‍ನ ಚಲನವಲನಗಳನ್ನು ಗುರುತಿಸಿ, ಎಲ್ಲಿದ್ದಾರೆ ಎಂದು ಪತ್ತೆ ಹಚ್ಚುತ್ತಾರೆ. ಅದನ್ನು ಸಿಬಿಐಗೆ ತಿಳಿಸುತ್ತಾರೆ. ಅಲ್ಲಿಂದ ನಮ್ಮ ತನಿಖಾ ಸಂಸ್ಥೆಗಳಿಗೆ ಮಾಹಿತಿ ಬರುತ್ತದೆ. ಸದ್ಯಕ್ಕೆ ಈವರೆಗೂ ಪ್ರಜ್ವಲ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ’

ಡಾ.ಜಿ.ಪರಮೇಶ್ವರ್, ಗೃಹ ಸಚಿವ

ಪ್ರಜ್ವಲ್ ಪ್ರಕರಣದಲ್ಲಿ ಮಧ್ಯಪ್ರವೇಶ ಇಲ್ಲ: ಸಿದ್ದರಾಮಯ್ಯ

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟ್ ಅಧಿಕಾರಿಗಳ ತನಿಖೆಯಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ . ನಮಗೆ ಸಿಬಿಐ ಬಗ್ಗೆ ಗೌರವ ಇದೆ. ಆದರೆ, ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ಕೊಡಿ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ. ಈ ಹಿಂದೆ ಸಿಬಿಐ ಬಗ್ಗೆ ಬಿಜೆಪಿಯವರು ಟೀಕೆ ಮಾಡಿರುವುದು ಗೊತ್ತಿದೆ ಎಂದರು.

ಬಿಜೆಪಿಯವರಿಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲವೇ?. ಅಲ್ಲದೆ, ಬಿಜೆಪಿಯವರಿಗೆ ಸುಳ್ಳು ಆರೋಪ ಮಾಡುವುದೇ ಕಸುಬು. ಸಂತ್ರಸ್ತೆ ದೂರಿನ ಮೇಲೆ ದೇವರಾಜೇಗೌಡನನ್ನು ಬಂಧಿಸಿರುವುದು. ಆದರೆ, ನಾವು ಪೊಲೀಸ್ ತನಿಖೆಯಲ್ಲಿ ಮಧ್ಯಪ್ರವೇಶ ಮಾಡುತ್ತಿಲ್ಲ. ತನಿಖೆ ಮಾಡಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News