ಭಾಷೆ ಕಾಪಾಡಿದರೆ ತಾಯಿಯನ್ನು ಕಾಪಾಡಿದಂತೆ : ಡಾ.ಚಂದ್ರಶೇಖರ ಕಂಬಾರ
ಬೆಂಗಳೂರು : ರಾಜ್ಯದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬ ಕನ್ನಡಿಗರೂ, ಕನ್ನಡ ಭಾಷೆಯ ಬೆಳವಣಿಗೆಗೆ ಪಣತೊಡಬೇಕಾಗಿದೆ. ಭಾಷೆಯನ್ನು ಕಾಪಾಡಿದರೆ ತನ್ನ ತಾಯಿಯನ್ನು ಕಾಪಾಡಿದಂತೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹೇಳಿದ್ದಾರೆ.
ಮಂಗಳವಾರ ನಗರದ ಆರ್ಆರ್ ವೈದ್ಯಕೀಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನ್ಯ ರಾಜ್ಯಗಳಿಂದ ನಗರಕ್ಕೆ ಉದ್ಯೋಗವನ್ನು ಹರಿಸಿ ವಲಸೆ ಬರುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಕನ್ನಡಿಗರು ಅನ್ಯ ರಾಜ್ಯಗಳಿಂದ ಬಂದವರಿಗೆ ಕನ್ನಡ ಕಲಿಸಿ ಕನ್ನಡವನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ. ಇಲ್ಲದಿದ್ದರೆ ಕನ್ನಡ ಭಾಷೆ ಉಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಆತಂಕಪಟ್ಟರು.
ಕುಲಪತಿ ಡಾ.ಎ.ಸಿ.ಷಣ್ಮುಗಂ ಮಾತನಾಡಿ, ಕನ್ನಡ ಭಾಷೆಗೆ 2ಸಾವಿರ ವರ್ಷಗಳ ಇತಿಹಾಸವಿದ್ದು, 8 ಜ್ಞಾನಪೀಠ ಪ್ರಶಸ್ತಿಗಳು ದೊರಕಿದೆ. ಬೇರೆ ಯಾವುದೇ ರಾಜ್ಯದ ಭಾಷೆಗೆ ಇಷ್ಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿಲ್ಲ. ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು ಯುವ ಸಮೂಹ ಕನ್ನಡದ ಘನತೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಡಾ.ಎಸ್.ವಿಜಯಾನಂದ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಎನ್.ಸೀತಾರಾಮ್, ಡೀನ್ ಡಾ.ಸತ್ಯಮೂರ್ತಿ ಬಿ., ವೈದ್ಯಕೀಯ ಅಧೀಕ್ಷಕ ಡಾ.ಪ್ರವೀಣ್ ಕುಮಾರ್, ಉಪಪ್ರಾಂಶುಪಾಲ ಡಾ.ಬಸವರಾಜ ಭಂಡಾರೆ, ಮಾನವ ಸಂಪನ್ಮೂಲ ಅಧಿಕಾರಿ ಜ್ಯೋತಿ ಸೇರಿದಂತೆ ಹಲವು ವೈದ್ಯರು ಸಿಬ್ಬಂದಿಗಳು ಭಾಗವಹಿಸಿದ್ದರು.