ಪಿಟಿಸಿಎಲ್ ಕಾಯ್ದೆ ತಿದ್ದುಪಡಿಯಲ್ಲಿ ನ್ಯಾಯ ಸಿಗುತ್ತಿಲ್ಲ : ಸಚಿವ ಮಹದೇವಪ್ಪ ನಿವಾಸಕ್ಕೆ ಪರಿಶಿಷ್ಟ ಜಾತಿಗಳ ಒಕ್ಕೂಟದ ಮುಖಂಡರ ಮುತ್ತಿಗೆ

Update: 2024-07-26 18:09 GMT

ಬೆಂಗಳೂರು : ಪಿಟಿಸಿಎಲ್ ಕಾಯಿದೆ ತಿದ್ದುಪಡಿಯಲ್ಲಿ ಸೇರಿಸಿರುವ ಸೆಕ್ಷನ್5(1)ಡಿ ತೆಗೆಯಬೇಕು. ಎಸ್ಸಿಪಿ-ಟಿಎಸ್‍ಪಿ ಮೀಸಲು ಹಣ ಅನ್ಯ ಯೋಜನೆಗಳಿಗೆ ಬಳಸಬಾರದು, ಬಳಕೆ ಮಾಡಿರುವ ಹಣ ವಾಪಸ್ ತರಬೇಕು ಎಂದು ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ನಿವಾಸಕ್ಕೆ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ’ದ ಮುಖಂಡರು ಹಾಗೂ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ಕ್ರ್ರೆಸೆಂಟ್ ರಸ್ತೆಯಲ್ಲಿರುವ ಮಹದೇವಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ ನೂರಾರು ಕಾರ್ಯಕರ್ತರು, ವಿದ್ಯಾರ್ಥಿಗಳಿಗೆ ನೀಡುವ ಪ್ರೊತ್ಸಾಹ ಧನ ಮುಂದುವರೆಸಬೇಕು ಮತ್ತು ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು, ಸಮುದಾಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಪಿಟಿಸಿಎಲ್ ಕಾಯಿದೆಯ ಹೊಸ ತಿದ್ದುಪಡಿಯಿಂದ ನ್ಯಾಯ ಸಿಕ್ಕಿಲ್ಲವಾದ್ದರಿಂದ ಕೂಡಲೆ ಪಿಟಿಸಿಎಲ್ ಕಾಯಿದೆ ಮತ್ತು ಸಂವಿಧಾನ ಆಶಯದ ವಿರುದ್ಧವಾಗಿ ಆದೇಶ ಮಾಡಿರುವ ನೆಕ್ಕಂಟಿ ರಾಮಲಕ್ಷ್ಮಿ ಈ ಪ್ರಕರಣವನ್ನು ಸುಪ್ರೀಂಕೋರ್ಟ್‍ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿ, ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಪ್ರಧಾನ ಸಂಚಲಾಕ ಬಸವರಾಜ ಕೌತಾಳ್ ಮಾತನಾಡಿ, ಪರಿಶಿಷ್ಟ ಜಾತಿ ಮತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಮೀಸಲಿಟ್ಟ ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಬಾರದು. ಈಗಾಗಲೆ ಅನ್ಯಯೋಜನೆಗಳಿಗೆ ಬಳಕೆ ಮಾಡಿರುವ ಹಣವನ್ನು ವಾಪಸ್ಸು ಮಾಡಬೇಕು. ಮೀಸಲು ಹಣ ದುರ್ಬಳಕೆ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಈ ವೇಳೆ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮತಿ ಪದಾಧಿಕಾರಿ ಕರಿಯಪ್ಪ ಗುಡಿಮನಿ, ವಕೀಲ ನರಸಿಂಹಮೂರ್ತಿ, ಒಕ್ಕೂಟದ ಪದಾಧಿಕಾರಿಗಳಾದ ಮಂಜುನಾಥ್ ಮರಾಠ, ವೆಂಕಟೇಶ್, ನಿಂಗರಾಜು, ವೇಣುಗೋಪಾಲ ಮೌರ್ಯ, ರಾಮಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News