ಕುವೆಂಪು ಸಮಾಜದ ಅನಿಷ್ಟಗಳ ಕುರಿತು ಅರಿವು ಮೂಡಿಸಿದವರು : ವೆಂಕಟೇಶ್ ಟಿ.ಎಂ.
ಬೆಂಗಳೂರು : ರಾಷ್ಟ್ರಕವಿ ಕುವೆಂಪು ಅವರು ಶ್ರೇಣಿಕೃತ ಸಮಾಜದ ಅನಿಷ್ಟಗಳ ವಿರುದ್ಧ, ಅಸಮಾನತೆ ಮತ್ತು ಕಂದಾಚಾರಗಳ ವಿರುದ್ಧ ತಮ್ಮ ಸಾಹಿತ್ಯದ ವಿವಿಧ ಪ್ರಕಾರದ ಕೃತಿಗಳ ಮೂಲಕ ಜನರಿಗೆ ಅರಿವು ಮೂಡಿಸಿದವರು ಎಂದು ಚಿಂತಕ ವೆಂಕಟೇಶ್ ಟಿ.ಎಂ. ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿನ ವಿನೋಭಾ ಸಭಾಂಗಣದಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕುವೆಂಪು ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಸಾಮಾಜಿಕ ಅಸಮಾನತೆ, ಧಮಾರ್ಂಧತೆ ಹೆಚ್ಚು ಪ್ರಚಾರವಾಗುತ್ತಿದ್ದು, ಆಳ್ವಿಕರು ಇದಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ಮತ್ತು ಬೆಂಬಲವನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಸಮಾನತೆ, ಕೋಮುವಾದಗಳ ವಿರುದ್ಧ ಯುವಕರು ಪ್ರತಿರೋಧವನ್ನು ಒಡ್ಡುವ ಅವಶ್ಯಕತೆ ಎಂದಿಗಿಂತಲೂ ಇಂದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಯುವಕರಲ್ಲಿ, ರೈತರಲ್ಲಿ ವಿದ್ಯಾರ್ಥಿಗಳಲ್ಲಿ ಕುವೆಂಪು ಅವರ ವೈಚಾರಿಕ ಪ್ರಜ್ಞೆಯನ್ನು ಬೆಳೆಸಲು ಪ್ರಚುರ ಪಡಿಸಲು ಹಲವಾರು ಸಾಂಸ್ಕೃತಿಕ ಹೋರಾಟವನ್ನು ನಡೆಸಬೇಕಾಗಿದೆ. ಆವಿಷ್ಕಾರ ಈ ನಿಟ್ಟಿನಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕುವೆಂಪುರವರು ಶತಮಾನದ ಹಿಂದೆ ತೋರಿಸಿಕೊಟ್ಟ ವೈಚಾರಿಕ ಪ್ರಜ್ಞೆಯ ವಿಚಾರಗಳನ್ನು ಪ್ರಚುರಪಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆಯಲ್ಲಿ ಆವಿಷ್ಕಾರ ಜಿಲ್ಲಾ ಸಂಚಾಲಕ ಡಾ.ಟಿ.ಎಸ್.ಸುನೀತ್ ಕುಮಾರ್, ಕಾರ್ಯಕರ್ತರಾದ ಗೀತಾ, ಹರಿಣಿ ಆಚಾರ್ಯ, ಪ್ರವೀಣ್, ಅಲಕ ರಾವ್, ಡಾ.ರಂಗನಾಥ್, ಮಂಜುನಾಥ್, ಮಹೆಬೂಬ್ ಸೇರಿದಂತೆ ಹಲವರು ಭಾಗವಹಿಸಿದ್ದರು.