ಬೆಂಗಳೂರು: ಪ್ರೀತಿ ನಿರಾಕರಿಸಿದ ಯುವತಿ ಮನೆಯವರ ವಾಹನಗಳಿಗೆ ಬೆಂಕಿಯಿಟ್ಟ ರೌಡಿಶೀಟರ್

Update: 2025-02-23 19:40 IST
ಬೆಂಗಳೂರು: ಪ್ರೀತಿ ನಿರಾಕರಿಸಿದ ಯುವತಿ ಮನೆಯವರ ವಾಹನಗಳಿಗೆ ಬೆಂಕಿಯಿಟ್ಟ ರೌಡಿಶೀಟರ್

ಸಾಂದರ್ಭಿಕ ಚಿತ್ರ (credit: GROK)

  • whatsapp icon

ಬೆಂಗಳೂರು: ಪ್ರೀತಿ ನಿರಾಕರಿಸಿದ ಯುವತಿಯ ಮೇಲಿನ ಸಿಟ್ಟಿಗೆ ಆಕೆಯ ಮನೆಯಲ್ಲಿದ್ದ ಕಾರು, ದ್ವಿಚಕ್ರ ವಾಹನಗಳಿಗೆ ರೌಡಿಶೀಟರ್‍ವೊಬ್ಬ ಬೆಂಕಿಯಿಟ್ಟ ಘಟನೆ ಇಲ್ಲಿನ ಸುಬ್ರಹ್ಮಣ್ಯಪುರ ಹಾಗೂ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವರದಿಯಾಗಿದೆ.

ಹನುಮಂತನಗರ ಠಾಣೆಯ ರೌಡಿಶೀಟರ್ ಆಗಿರುವ ರಾಹುಲ್(25) ಎಂಬಾತ ಫೆ.22ರ ರಾತ್ರಿ ತನ್ನ ಸಹಚರರೊಂದಿಗೆ ತೆರಳಿ ಯುವತಿಯ ಮನೆಯವರ ಎರಡು ಕಾರುಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿಯಿಟ್ಟಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

9 ವರ್ಷಗಳಿಂದ ಯುವತಿಯೊಬ್ಬಳನ್ನು ರಾಹುಲ್ ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ರಾಹುಲ್‍ನ ಸಂಪರ್ಕದಿಂದ ದೂರ ಉಳಿದಿದ್ದ ಯುವತಿ ಆತನನ್ನು ನಿರ್ಲಕ್ಷ್ಯಿಸಲಾರಂಭಿಸಿದ್ದಳು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಆರೋಪಿ ಫೆ.22ರ ಶನಿವಾರ ರಾತ್ರಿ ತನ್ನ ಸಹಚರರೊಂದಿಗೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ಯುವತಿಯ ಮನೆ ಬಳಿ ಬಂದು ದ್ವಿಚಕ್ರ ವಾಹನಕ್ಕೆ ಬೆಂಕಿಯಿಟ್ಟಿದ್ದಾನೆ.

ಬಳಿಕ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿರುವ ಯುವತಿಯ ಮತ್ತೊಂದು ಮನೆ ಬಳಿ ಅಪಾರ್ಟ್‍ಮೆಂಟ್‍ನ ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ಯುವತಿಯ ಫೋಟೋ ತೋರಿಸಿ ಆಕೆಯ ಮನೆಯವರ ಕಾರುಗಳು ತಿಳಿದುಕೊಂಡು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ತಕ್ಷಣ ಎಚ್ಚೆತ್ತ ಸ್ಥಳಿಯರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದರಿಂದ ಅವಘಡವೊಂದು ತಪ್ಪಿದೆ. ಘಟನೆಯಲ್ಲಿ ಒಟ್ಟು 2 ಕಾರು, ದ್ವಿಚಕ್ರ ವಾಹನ ಬೆಂಕಿಗಾಹುತಿಯಾಗಿವೆ. ಬೆಂಗಳೂರು ದಕ್ಷಿಣ ವಿಭಾಗದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ 18ಕ್ಕೂ ಅಧಿಕ ಪ್ರಕರಣಗಳಲ್ಲಿ ರಾಹುಲ್ ಆರೋಪಿಯಾಗಿದ್ದಾನೆ. ಆತನನ್ನು ರೌಡಿ ಪಟ್ಟಿಗೆ ಸೇರಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ವಿವರಿಸಿದ್ದಾರೆ.

ಈ ಘಟನೆ ಸಂಬಂಧ ಆರೋಪಿ ಮತ್ತು ಆತನ ಸಹಚರರ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News