ಆರೆಸ್ಸೆಸ್ ಅಂಬೇಡ್ಕರ್ ನೀಡಿದ ಸಂವಿಧಾನದ ವಿರುದ್ಧವೇ ಕೆಲಸ ಮಾಡುತ್ತಿದೆ: ಮಾವಳ್ಳಿ ಶಂಕರ್
ಬೆಂಗಳೂರು : ಸಂವಿಧಾನದಲ್ಲಿ ಬ್ರಾಹ್ಮಣತ್ವ ಇಲ್ಲ ಎಂದು ಆರೆಸ್ಸೆಸ್‍ನವರು ಸಂವಿಧಾನವನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದು, ಈಗಲೂ ಆರೆಸ್ಸೆಸ್ ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದ ವಿರುದ್ಧವೇ ಕೆಲಸ ಮಾಡುತ್ತಿದೆ ಎಂದು ದಲಿತ ಮುಖಂಡ ಮಾವಳ್ಳಿ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಇಲ್ಲಿನ ವಿಧಾನಸೌಧದ ಮುಂಭಾಗ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಆಯೋಜಿಸಿದ್ದ ಅಂಬೇಡ್ಕರ್ ರವರ ಪರಿನಿಬ್ಬಾಣ ದಿನಾಚಾರಣೆಯಲ್ಲಿ ಮಾತನಾಡಿದ ಅವರು, ಈ ದೇಶ ಬುದ್ಧ ಭಾರತವಾಗಿರಬೇಕು, ಹೊರತಾಗಿ ಬ್ರಾಹ್ಮಣ ಭಾರತವಾಗಿರಬಾರದು. ಬ್ರಾಹ್ಮಣತ್ವ ಹಾಗೂ ಬುದ್ಧ ತತ್ವ ನಡುವೆ ನಡೆಯುತ್ತಿರುವ ಸಂಘರ್ಷವೇ ಭಾರತದ ಚರಿತ್ರೆಯಾಗಿದೆ ಎಂದರು.
ಬಾಬಾ ಸಾಹೇಬರು ಈ ದೇಶವನ್ನು ಸಂವಿಧಾನದ ಮೂಲಕ ಕಾಪಾಡಬೇಕು ಎಂದು ಭಾವಿಸಿದ್ದರು. ಆದರೆ ಈ ಆಶಯಕ್ಕೆ ವಿರುದ್ಧವಾಗಿ ಈ ದೇಶದಲ್ಲಿ ಚಟುವಟಿಕೆಗಳು ನಡೆಯುತ್ತಿದೆ. ಜ್ಯಾತ್ಯಾತೀತ ಭಾರತ ನಿರ್ಮಾಣಕ್ಕೆ ಹಾಗೂ ಜಾತಿ ವ್ಯವಸ್ಥೆಯ ವಿನಾಶಕ್ಕೆ ಸಂಘಟಿತ ಹೋರಾಟವನ್ನು ಮಾಡಲು ಬಾಬಾ ಸಾಹೇಬರು ಬಹಿಷ್ಕೃತ ಹಿತಾಕಾರಣಿ ಸಭೆಯನ್ನು ಆರಂಭಿಸಿದರು. ಆದರೆ ಈ ಹೋರಾಟವನ್ನು ನಿರ್ಮೂಲನೆ ಮಾಡಲು ಆರೆಸ್ಸೆಸ್ ಹುಟ್ಟಿತ್ತು ಎಂದರು.
ಬಾಬಾ ಸಾಹೇಬರ ಬಹಿಷ್ಕೃತ ಹಿತಕಾರಣಿ ಸಭೆಗೆ ವಿರುದ್ಧವಾಗಿ ಆರೆಸ್ಸೆಸ್ ಇದೆ. ಮೊದಲಿದ್ದ ಬ್ರಾಹ್ಮಣ ಮಹಾಸಭೆಯ ಜಾತಿ ಸೀಮಿತ ಪದ ಎಂದು ಭಾವಿಸಿ ಹಿಂದು ಮಹಾಸಭವಾಗಿ ಬದಲಿಸಿದರು. ಜಾತಿ ವ್ಯವಸ್ಥೆಯಿಂದ ಬಂಡಾಯ ಎದ್ದ ಜನ ಹಿಂದು ಧರ್ಮವನ್ನು ದಿಕ್ಕರಿಸಿದ ಕಾರಣ ಆರೆಸ್ಸೆಸ್ ಬಂದಿತು ಎಂದು ಅವರು ತಿಳಿಸಿದರು.
‘ದೇವರ ಮುಂದೆ ನಾವೆಲ್ಲಾ ಸಮಾನರು ಎಂಬುದು ಬೇಡ, ಬದಲಾಗಿ ಮನಷ್ಯರ ಮುಂದೆ ನಾವೆಲ್ಲ ಸಮಾನರು ಎಂಬ ಭಾವ ಬರಬೇಕು. ದೇಶದಲ್ಲಿ ಇಂದು ಬ್ರಾಹ್ಮಣತ್ವ ಹಾಗೂ ಬುದ್ದ ತತ್ವದ ನಡುವೆ ಸಂಘರ್ಷ ನಡೆಯುತ್ತಿದೆ. ಇದೇ ಭಾರತದ ಚರಿತ್ರೆಯು ಆಗಿದೆ’
-ಮಾವಳ್ಳಿ ಶಂಕರ್, ದಸಂಸ ಪ್ರಧಾನ ಸಂಚಾಲಕ