ಶ್ರೀರಾಮುಲು ಬೆಂಬಲಿಸಿ ರಾಜ್ಯಾದ್ಯಂತ ಚಳವಳಿ : ವಾಲ್ಮೀಕಿ ಸಮುದಾಯ

ಬಿ.ಶ್ರೀರಾಮುಲು
ಬೆಂಗಳೂರು : ‘ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವಾಲ್ಮೀಕಿ ಸಮುದಾಯದ ಮುಖಂಡರು ಎಚ್ಚರಿಸಿದ್ದಾರೆ.
ಶನಿವಾರ ಬಳ್ಳಾರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಾಲ್ಮೀಕಿ ಸಮುದಾಯದ ಮುಖಂಡ ಜೋಳದರಾಶಿ ತಿಮ್ಮಪ್ಪ, ಜನಾರ್ದನ ರೆಡ್ಡಿ, ಶ್ರೀರಾಮುಲು ವಿರುದ್ಧ ‘ನೀನು ಕೀಳು ಜಾತಿಯವನು, ಕೊಡಲಿ ಹಿಡಿದುಕೊಂಡು ಬೀದಿಯಲ್ಲಿ ತಿರುಗಾಡುತ್ತಿದ್ದವನು. ನಿನ್ನ ರಾಜಕೀಯ ಜೀವನ ರೂಪಿಸಿದ್ದು ನಾನು' ಎಂದು ಅವಹೇಳನ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿದರು.
‘ಆರು ಬಾರಿ ಶಾಸಕ, ನಾಲ್ಕು ಬಾರಿ ಮಂತ್ರಿ ಆಗಿ ರಾಜ್ಯದ ಜನರ ಸೇವೆ ಮಾಡಿದ ಜನನಾಯಕ ಬಿ. ಶ್ರೀರಾಮುಲು ಅವರಿಗೆ ನಿಂದನೆ ಮಾಡಿದ ಜನಾರ್ದನ ರೆಡ್ಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಜಾತಿ ನಿಂದನೆ ಪ್ರಕರಣ ದಾಖಲು ಮಾಡಿಕೊಳ್ಳಬೇಕು’ ಎಂದು ಎಸ್ಪಿಗೆ ದೂರು ನೀಡಲಾಗುವುದು ಎಂದು ಅವರು ಹೇಳಿದರು.
‘ಜನಾರ್ದನ ರೆಡ್ಡಿ ಕೂಡಲೇ ಕ್ಷಮೆ ಕೇಳಬೇಕು. ಪಕ್ಷದಿಂದ ರೆಡ್ಡಿಯನ್ನು ಹೊರ ಹಾಕಬೇಕು. ಶ್ರೀರಾಮುಲು ಮನಸ್ಥಿತಿ ಏನು, ರೆಡ್ಡಿ ಮನಸ್ಥಿತಿ ಏನು ಎಂಬುದು ಬಿಜೆಪಿಗೆ ಗೊತ್ತಾಗಿದೆ. ನಾವು ರಾಮುಲು ಪರವಾಗಿ ಇರುತ್ತೇವೆ. ಪೊಲೀಸರು, ರೆಡ್ಡಿ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಚಳವಳಿ ರೂಪಿಸುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.