ಶ್ರೀರಾಮುಲು ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡದಿದ್ದರೆ ಬಿಜೆಪಿಗೆ ಬಹಿಷ್ಕಾರ : ವಾಲ್ಮೀಕಿ ಸ್ವಾಭಿಮಾನಿ ಸಂಘ

Update: 2025-01-26 20:29 IST
ಶ್ರೀರಾಮುಲು ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡದಿದ್ದರೆ ಬಿಜೆಪಿಗೆ ಬಹಿಷ್ಕಾರ : ವಾಲ್ಮೀಕಿ ಸ್ವಾಭಿಮಾನಿ ಸಂಘ
  • whatsapp icon

ಬೆಂಗಳೂರು : ಮಾಜಿ ಸಚಿವ ಬಿ.ಶ್ರೀರಾಮುಲುರಿಗೆ ರಾಜ್ಯಸಭಾ ಸದಸ್ಯತ್ವ ನೀಡಿ, ಕೇಂದ್ರ ಮಂತ್ರಿ ಮಾಡದೇ ಹೋದಲ್ಲಿ ವಾಲ್ಮಿಕಿ ಸಮಯದಾಯವು ಬಿಜೆಪಿಯನ್ನು ಮುಂದಿನ ಎಲ್ಲ ಚುನಾವಣೆಗಳಲ್ಲೂ ಬಹಿಷ್ಕಾರ ಮಾಡಲಿದೆ ಎಂದು ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯಾಧ್ಯಕ್ಷ ಚಳುವಳಿ ರಾಜಣ್ಣ ಎಚ್ಚರಿಕೆ ನೀಡಿದ್ದಾರೆ.

ರವಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ವಾಲ್ಮಿಕಿ ಸ್ವಾಭಿಮಾನಿ ಸಂಘ, ಜೈಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ, ಶ್ರೀರಾಮುಲು ಅಭಿಮಾನಿ ಬಳಗ ಸೇರಿದಂತೆ ಹಲವು ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವಾರದೊಳಗೆ ಜನಾರ್ದನ ರೆಡ್ಡಿಯನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡದೇ ಹೋದಲ್ಲಿ ಉಗ್ರಹೋರಾಟದ ಬಿಸಿ ಮುಟ್ಟಿಸಲಿದ್ದೇವೆ ಎಂದು ಹೇಳಿದರು.

ಬಿಜೆಪಿಯು ಶ್ರೀರಾಮುಲುಗೆ ಮಾಡಿದ ಅನ್ಯಾಯಕ್ಕೆ ಪರಿಹಾರವಾಗಿ ಅವರನ್ನು ಕೇಂದ್ರದ ಮಂತ್ರಿ ಮಾಡಲಿ, ಬಿಜೆಪಿಯ ಇತಿಹಾಸದಲ್ಲೇ ವಾಲ್ಮಿಕಿ ಸಮುದಾಯದ ನಾಯಕರೊಬ್ಬರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ ಉದಾಹರಣೆ ಇಲ್ಲ. ಈಗಲಾದರೂ ನಮ್ಮ ಸಮುದಾಯಕ್ಕೆ ನ್ಯಾಯ ಕೊಡಲಿ ಎಂದು ಅವರು ಆಗ್ರಹಿಸಿದರು.

ಸಂಡೂರು ಉಪಚುನಾವಣೆ ಸೋಲಿನ ಹೊಣೆಯನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜನಾರ್ದನ ರೆಡ್ಡಿ ಹೊರಬೇಕಿತ್ತು. ತಮ್ಮ ತಪ್ಪನ್ನ ಮರೆಮಾಚಲು ಶ್ರೀರಾಮುಲು ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ರಾಮುಲು ಸಂಡೂರಿನಲ್ಲಿ ಪ್ರಚಾರ ಮಾಡದೇ ಹೋಗಿದ್ದರೆ, ಬಿಜೆಪಿ ಹೀನಾಯ ಸೋಲು ಅನುಭವಿಸಬೇಕಿತ್ತು. ವಾಲ್ಮೀಕಿ ಸಮುದಾಯವನ್ನೇ ಬಿಜೆಪಿ ಕಡೆಗಣಿಸುತ್ತಿರುವುದು ತಮ್ಮ ವಿನಾಶಕ್ಕೆ ತಾವೇ ದಾರಿ ಮಾಡಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಜನಾರ್ದನ ರೆಡ್ಡಿ ನಿರಾಧಾರವಾಗಿ ಆರೋಪ ಮಾಡುತ್ತಿದ್ದರೂ ಬಿಜೆಪಿ ಕೈಕಟ್ಟಿ ಕುಳಿತಿರುವುದು ನಾಚಿಕೆಗೇಡಿನ ವಿಷಯ. ಈ ಧೋರಣೆ ಹೀಗೆ ಮುಂದುವರೆದರೆ, ವಾಲ್ಮಿಕಿ ಸಮಯದಾಯ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಶ್ರೀರಾಮುಲು ವಾಲ್ಮಿಕಿ ಸಮುದಾಯದ ರಾಷ್ಟ್ರೀಯ ನಾಯಕ, ಈ ಸಮುದಾಯದ ಋಣ ಸಂದಾಯ ಮಾಡದಬೇಕೆಂಬ ಆಶಯವಿದ್ದರೆ, ರಾಮುಲುಗೆ ಅಧಿಕಾರ ನೀಡಿ ಎಂದು ಅವರು ಆಗ್ರಹಿಸಿದರು.

ದಲಿತ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಂ.ಎಂ.ರಾಜು ಮಾತನಾಡಿ, ಸಮುದಾಯಕ್ಕೆ ಅನ್ಯಾಯವಾದರೆ ನೋಡಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ರಾಜ್ಯದ ಸಂಪತ್ತನ್ನು ಲೂಟಿ ಹೊಡೆದು ಜೈಲಿಗೆ ಹೋದ ವ್ಯಕ್ತಿ ರೆಡ್ಡಿ ಮಾತನ್ನು ಕೇಳಿ ರಾಮುಲುಗೆ ಅವಮಾನ ಮಾಡುತ್ತಿರುವುದು ಸಲ್ಲ, ಈ ಕೂಡಲೇ ಶ್ರೀರಾಮುಲು ಬಳಿ, ರೆಡ್ಡಿ ಹಾಗೂ ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ವಾಲ್ಮೀಕಿ ಯುವಬ್ರಿಗೇಡ್‍ನ ಶಿವನಾಯಕ ಮಾತನಾಡಿ, ವಾಲ್ಮಿಕಿ ಹಾಗೂ ದಲಿತ ಸಮುದಾಯಗಳನ್ನು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಕಡೆಗಣಿಸುತ್ತಲೇ ಬಂದಿವೆ. ಈ ಸಮುದಾಯದ ನಾಯಕರು ಬೆಳೆಯುವುದು ಆ ಪಕ್ಷದ ನಾಯಕರಿಗೆ ಇಷ್ಟವಿದ್ದಂತಿಲ್ಲ. ಬಿಜೆಪಿ ಶ್ರೀರಾಮುಲು ಅವರಿಗೆ ಮಾಡುತ್ತಿರುವ ಅನ್ಯಾಯ ನೋಡಿ ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೇ ಅನ್ಯಾಯ ಮಾಡಿದ್ದಾರೆ. ಇದಕ್ಕಾಗಿ ಕಳೆದ ಚುನಾವಣೆಯಲ್ಲಿ ವಾಲ್ಮಿಕಿ ಸಮುದಾಯು ಬಿಜೆಪಿಯ ಕೈಬಿಟ್ಟಿದೆ. ನಮ್ಮ ಸಮುದಾಯದ ನಾಯಕರನ್ನು ಹೀಗೆ ಕಡೆಗಣಿಸುತ್ತಲೇ ಇದ್ದರೆ, ಬಿಜೆಪಿಯು ಮುಂದಿನ ಎಲ್ಲ ಚುನಾವಣೆಗಳಲ್ಲೂ ಇದೇ ರೀತಿಯ ಹೀನಾಯ ಸೋಲು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಶ್ರೀರಾಮು ಅಭಿಮಾನಿ ಬಳಗದ ನವೀನ್ ಮದಕರಿ, ಪ್ರದೀಪ್ ಮನಮೊಹನ್, ಎಸ್‍ಎಸ್‍ಡಿ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ, ಆರ್‍ಪಿಐನ ಮುನಿಸ್ವಾಮಿ, ವಕೀಲ ಪ್ರ್ರೊ.ಹರಿರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News