ಸ್ಪೀಕರ್ ಅನುಮತಿ ಇಲ್ಲದೆ ಸರಕಾರದ ವಿರುದ್ಧ ನಿರ್ಣಯ ಮಂಡಿಸಿದ ಪ್ರತಿಪಕ್ಷ

Update: 2024-02-23 14:03 GMT

ಬೆಂಗಳೂರು : ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ಅನುಮತಿ ಇಲ್ಲದೆ ರಾಜ್ಯ ಸರಕಾರದ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಿರ್ಣಯ ಮಂಡಿಸಿತು.

ಶುಕ್ರವಾರ ವಿಧಾನಸಭೆಯಲ್ಲಿ ಸದನ ಮತ್ತೆ ಸೇರಿದಾಗ ಸ್ಪೀಕರ್ ಯು.ಟಿ.ಖಾದರ್, ಧರಣಿಯಲ್ಲಿದ್ದ ಸದಸ್ಯರಿಗೆ ತಮ್ಮ ಸ್ಥಾನಗಳಿಗೆ ತೆರಳುವಂತೆ ಮನವಿ ಮಾಡಿದರು. ಆದರೆ, ಸ್ಪೀಕರ್ ಮನವಿಗೆ ಸೊಪ್ಪು ಹಾಕದ ಸದಸ್ಯರು ಧರಣಿ ಮುಂದುವರಿಸಿ ಸರಕಾರ ವಿರುದ್ಧ ಘೋಷಣೆ ಕೂಗುತ್ತಿದ್ದರು.

ಈ ಮಧ್ಯೆ ಖಾದರ್ ಅವರು ವಿಧೇಯಕಗಳನ್ನು ಕೈಗೆತ್ತಿಕೊಂಡರು. ಈ ನಡುವೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ‘ಸಭಾಧ್ಯಕ್ಷರೇ, ಆಡಳಿತ ಪಕ್ಷದವರು ನಿಯಮಾವಳಿಗಳನ್ನು ತೂರಿ ನಿರ್ಣಯಗಳನ್ನು ಮಂಡಿಸಿದ್ದಾರೆ. ನಾವು ಒಂದು ನಿರ್ಣಯವನ್ನು ಮಂಡಿಸುತ್ತೇವೆ, ಇದಕ್ಕೆ ಅವಕಾಶ ಕೊಡಿ’ ಎಂದು ಹೇಳಿದರಾದರೂ ಆ ಕಡೆ ಸ್ಪೀಕರ್ ಲಕ್ಷ್ಯವಹಿಸದೆ ಶಾಸನ ರಚನೆ ಕಲಾಪವನ್ನು ಮುಂದುವರೆಸಿದರು.

ಶಾಸನ ರಚನೆ ಕಲಾಪಗಳು ನಡೆಯುತ್ತಿರುವಾಗಲೇ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ನಿರ್ಣಯವನ್ನು ಮಂಡಿಸಿ, ಭಾರತ ಪ್ರಜಾಸತ್ತಾತ್ಮಕ ದೇಶವಾಗಿ 75 ವರ್ಷ ಕಳೆದಿದೆ. ಅಧಿಕವಾಗಿ ಆಡಳಿತ ಮಾಡಿರುವುದು ಕಾಂಗ್ರೆಸ್ ಪಕ್ಷ. ಹಲವಾರು ವರ್ಷ ರಾಜ್ಯಗಳ ತೆರಿಗೆ ಪಾಲು ಕೇವಲ ಶೇ.20ರಷ್ಟು ಕೂಟ್ಟಿದ್ದು, ಶೇ.30ರಷ್ಟು ಹೆಚ್ಚಿಸಲು ಸುದೀರ್ಘ ಹೋರಾಟ ರಾಜ್ಯ ಮಾಡಬೇಕಾಯಿತು. ಶೇ.30ರಿಂದ ಶೇ.40ರಷ್ಟು ಏರಿಕೆ ಮಾಡುವ ಬೇಡಿಕೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮಾಡಲು ನಿರಾಕರಿಸಿತ್ತು. ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚಿನ ಪಾಲು ಕೊಡದ ಯುಪಿಎ ಸರಕಾರದ ವಿರುದ್ಧ ಚಕಾರ ಎತ್ತದ ರಾಜ್ಯ ಕಾಂಗ್ರೆಸ್ ಕೇವಲ ರಾಜಕಾರಣಕ್ಕಾಗಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ’ ಎಂದು ಹೇಳಿದರು.

ನಾವೆಲ್ಲರೂ ಬದ್ಧತೆ ತೋರಬೇಕು: ಕರ್ನಾಟಕದಲ್ಲಿ ಅಭಿವೃದ್ಧಿ ಮತ್ತು ಕರ್ನಾಟಕದ ಪಾಲನ್ನು ನ್ಯಾಯಸಮ್ಮತವಾಗಿ ಪಡೆದುಕೊಳ್ಳಲು ನಾವೆಲ್ಲರೂ ಬದ್ದತೆ ತೋರುಸಬೇಕು. ಆದರೆ ಸುಳ್ಳು ಕಾಲ್ಪನಿಕ ಮತ್ತು ರಾಜಕೀಯ ಪ್ರೇರಣೆಯ ವಿಚಾರ, ವಾದ, ನಿರ್ಣಯಗಳನ್ನು ಖಂಡಿಸಲೇಬೇಕು. ನಾವು ನಿನ್ನೆ ರಾಜ್ಯ ಸರಕಾರ ತಂದ ಆರ್ಥಿಕತೆಯ ಬಗ್ಗೆ ನಿರ್ಣಯವನ್ನು ಖಂಡಿಸುತ್ತೇವೆ ಎಂದರು.

ಅಲ್ಲದೆ, ರಾಜ್ಯ ಸರಕಾರವು ತೆರಿಗೆ ಸಂಗ್ರಹ, ಹಂಚಿಕೆ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಅದನ್ನು ಮರೆಮಾಚಲು ಕೇಂದ್ರವನ್ನು ದೂಷಿಸುವ ಪ್ರವೃತ್ತಿಯನ್ನು ಕೈಬಿಡಬೇಕೆಂದು ಒತ್ತಾಯ ಮಾಡುತ್ತೇವೆ ಎಂದು ಅಶೋಕ್ ಸದನದಲ್ಲಿ ಓದಿ ತಮ್ಮ ಶಾಸಕರನ್ನು ಬೆಂಬಲ ಕೋರಿದರು. ಆಗ ಎಲ್ಲ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News