ಆಟೋ, ಕ್ಯಾಬ್ ಚಾಲಕರಿಂದ ಸಾರಿಗೆ ಇಲಾಖೆ ಕಚೇರಿಗೆ ಮುತ್ತಿಗೆ

Update: 2024-07-04 13:25 GMT

ಬೆಂಗಳೂರು : ರಾಜ್ಯದಲ್ಲಿ ಖಾಸಗಿ ಬಸ್, ಆಟೋ, ಟ್ಯಾಕ್ಸಿ, ಗೂಡ್ಸ್, ಶಾಲಾ ವಾಹನಗಳ ಚಾಲಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಹಿಂದಿನ ವರ್ಷ ಸೆಪ್ಟೆಂಬರ್ ನಲ್ಲಿ ಸಾರಿಗೆ ಇಲಾಖೆಯು ಭರವಸೆ ನೀಡಿದ್ದರೂ, ಸರಕಾರ ಇದುವರೆಗೂ ಬೇಡಿಕೆ ಈಡೇರಿಸುವ ಕುರಿತು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಖಾಸಗಿ ಸಾರಿಗೆ ವಾಹನ ಚಾಲಕರು ಗುರುವಾರ ಇಲ್ಲಿನ ಸಾರಿಗೆ ಇಲಾಖೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

ರಾಜ್ಯ ಸರಕಾರವು ಫೆಬ್ರವರಿಯಲ್ಲಿಯೇ ‘ಒನ್ ಸಿಟಿ ಒನ್ ರೇಟ್’ ಆದೇಶವನ್ನು ಹೊರಡಿಸಿದ್ದು, ಆದೇಶ ಆಗಿ ಆರು ತಿಂಗಳಾದರೂ ಓಲಾ-ಉಬರ್ ಸೇರಿ ಯಾವುದೇ ಅಗ್ರಿಗೇಟರ್ ಕಂಪೆನಿಗಳು ಆದೇಶವನ್ನು ಪಾಲನೆ ಮಾಡುತ್ತಿಲ್ಲ. ಆರ್ ಟಿಓ ಅಧಿಕಾರಿಗಳು ಆದೇಶ ಪಾಲನೆ ಮಾಡದ ಕಂಪೆನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚಾಲಕರು ಆರೋಪಿಸಿದರು.

ರಾಜ್ಯ ಸರಕಾರ ಪ್ರಯಾಣಿಕರಿಗೆ ತೊಂದರೆ ಆಗಬಾರದು, ಪ್ರಯಾಣಿಕರಿಂದ ದುಪ್ಪಟ್ಟು ದರ ತೆಗೆದುಕೊಳ್ಳಬಾರದು ಎಂದು ‘ಒನ್ ಸಿಟಿ ಒನ್ ರೇಟ್’ ಆದೇಶ ಹೊರಡಿಸಿದೆ. ಆದರೆ ಓಲಾ-ಉಬರ್ ಸೇರಿದಂತೆ ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪೆನಿಗಳು ದುಪ್ಪಟ್ಟು ದರವನ್ನು ಪಡೆದುಕೊಳ್ಳುತ್ತಿವೆ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಇದರ ಲಾಭವನ್ನು ಚಾಲಕರಿಗೂ ಸಿಗುತ್ತಿಲ್ಲ. ಹೀಗಾಗಿ ಕೂಡಲೇ ಈ ಅಗ್ರಿಗೇಟರ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಓಲಾ ಮತ್ತು ಉಬರ್ ಸಂಸ್ಥೆಗಳ ದರಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಓನ್ ಸಿಟಿ ಓನ್ ಫೇರ್ ಜಾರಿಯಾಗಬೇಕು. ಆ‌ರ್ ಟಿಓ ಅಧಿಕಾರಿಗಳು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಕಾರ್ಯಾಚರಣೆ ಮಾಡಬೇಕು. ಪೋರ್ಟರ್ ಕಂಪನಿಯನ್ನು ನಿರ್ಬಂಧಿಸಬೇಕು. ರ್ಯಾಪಿಡೋ ಬೈಕ್ ಟ್ಯಾಕ್ಸಿ ನಿಲ್ಲಬೇಕು. ಸ್ಕೂಲ್ ವಾಹನಗಳಿಗೆ ಪರ್ಮಿಟ್ ನೀಡಬೇಕು ಎಂದು ಪ್ರತಿಭಟನಾಕಾರರು ಸರಕಾರವನ್ನು ಒತ್ತಾಯಿಸಿದರು.

ಅನಧಿಕೃತವಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ಆಟೋ ಚಾಲಕರು ಕ್ರಮ ಕೈಗೊಳ್ಳಬಾರದು ಎಂದು ಹೇಳಿದ್ದಾರೆ. ನಾವು ಪ್ರಶ್ನೆ ಮಾಡಿದರೆ 10 ಸಾವಿರ ರೂ.ಗಳಿಂದ 20 ಸಾವಿರ ರೂ.ಗಳವರೆಗೆ ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಪಡೆಯುತ್ತಿದ್ದಾರೆ. ಓಲಾ ಮತ್ತು ಉಬರ್ ಸಂಸ್ಥೆಗಳು ಚಾಲಕರಿಗೆ ಎಷ್ಟು ದುಡ್ಡು ಕೊಡುತ್ತಿದ್ದಾರೆ. ಇದು ಹೊರಗಡೆ ಬರಬೇಕು ಎಂದು ಖಾಸಗಿ ಸಾರಿಗೆ ವಾಹನ ಚಾಲಕರು ಒತ್ತಾಯಿಸಿದರು.

ಇಲ್ಲಿನ ಶಾಂತಿನಗರದಲ್ಲಿರುವ ಬಿಟಿಎಸ್ ರೋಡ್ ಬ್ಲಾಕ್ ಮಾಡಿ, ಖಾಸಗಿ ಸಾರಿಗೆ ವಾಹನ ಚಾಲಕರು ಪ್ರತಿಭನಟನೆ ನಡೆಸಿದ ಕಾರಣ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸಾವಿರಾರು ಆಟೋ, ಕ್ಯಾಬ್‍ಗಳನ್ನು ತಂದಿರುವ ಚಾಲಕರು ತಮ್ಮ ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿತ್ತು. ಆಟೋ ಕ್ಯಾಬ್‍ಗಳನ್ನು ಎಲ್ಲೆಂದಲ್ಲಿ ನಿಲ್ಲಿಸಿದ್ದರಿಂದ ಬಿಎಂಟಿಸಿ ಸೇರಿದಂತೆ ವಾಹನಗಳೆಲ್ಲ ರಸ್ತೆಯಲ್ಲೇ ನಿಂತು ವಾಹನ ದಟ್ಟನೆ ಉಂಟಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News