ಯುಜಿ ವೈದ್ಯಕೀಯ, ದಂತ ವೈದ್ಯಕೀಯ : ವಿಶೇಷ ʼಸ್ಟ್ರೇ ವೇಕೆನ್ಸಿʼ ಸೀಟು ಹಂಚಿಕೆ ಆರಂಭ

Update: 2024-11-18 16:50 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಅಂತಿಮ ಸುತ್ತಿನ ಸೀಟು ಹಂಚಿಕೆಯ ನಂತರ ಪ್ರವೇಶ ಪಡೆಯದಿರುವ ಯುಜಿ ವೈದ್ಯಕೀಯ ಸೀಟುಗಳಿಗೆ ಮತ್ತು ಹಂಚಿಕೆಯಾಗದೆ ಉಳಿದಿರುವ ಹಾಗೂ ಪ್ರವೇಶ ಪಡೆಯದಿರುವ ದಂತ ವೈದ್ಯಕೀಯ ಸೀಟುಗಳಿಗೆ ವಿಶೇಷ ʼಸ್ಟ್ರೇ ವೇಕೆನ್ಸಿʼ ಸುತ್ತಿನ ಆನ್ಲೈನ್ ಸೀಟು ಹಂಚಿಕೆ ಪ್ರಕ್ರಿಯೆ ನ.19ರಿಂದ ನಡೆಯಲಿದೆ.

ಈ ಕುರಿತು ಕೆಇಎ ಪ್ರಕಟನೆ ಹೊರಡಿಸಿದ್ದು, ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳೊಂದಿಗೆ ಕಾಲೇಜಿನಲ್ಲಿ ನ.29ರ ಸಂ. 5.30 ರೊಳಗೆ ಪ್ರವೇಶ ಪಡೆಯಬೇಕು ಎಂದು ಸೂಚಿಸಲಾಗಿದೆ. ಈ ಪ್ರಕ್ರಿಯೆಯ ವಿವಿಧ ಹಂತಗಳ ವೇಳಾಪಟ್ಟಿಗಾಗಿ ಹಾಗೂ ಶುಲ್ಕ ಪಾವತಿ ವಿವರಗಳಿಗಾಗಿ ಪ್ರಾಧಿಕಾರದ ವೆಬ್ಸೈಟ್ ನೋಡಬಹುದು ಎಂದಿದೆ.

ಯುಜಿ ವೈದ್ಯಕೀಯದಲ್ಲಿ ಲಭ್ಯ ಸೀಟುಗಳ ಸಂಖ್ಯೆ 2 ಆಗಿದ್ದರೆ, ದಂತ ವೈದ್ಯಕೀಯದಲ್ಲಿ 35 ಇವೆ. ಈವರೆಗೆ ಯಾವುದೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು ಹಾಗೂ ವೈದ್ಯಕೀಯ ಸೀಟು ಹಂಚಿಕೆಯ ನಂತರ ಕಾಷನ್ ಡಿಪಾಸಿಟ್ ಮುಟ್ಟುಗೋಲಿಗೆ ಒಳಪಟ್ಟು ಸೀಟು ರದ್ದು ಪಡಿಸಿಕೊಂಡಿರುವ ಅಭ್ಯರ್ಥಿಗಳು ಆಸಕ್ತಿ ಇದ್ದಲ್ಲಿ ಲಭ್ಯ ವೈದ್ಯಕೀಯ / ದಂತ ವೈದ್ಯಕೀಯ ಸೀಟುಗಳಿಗೆ ವಿಶೇಷ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಭಾಗವಹಿಸಬಹುದು.

ಕೆಇಎ ಮುಖಾಂತರ ಯುಜಿನೀಟ್-2024ರ ದಂತ ವೈದ್ಯಕೀಯ ಸೀಟು ಹಂಚಿಕೆಯಾದವರು ವೈದ್ಯಕೀಯ ಸೀಟು ಹಂಚಿಕೆಗಾಗಿ ಮಾತ್ರ ಭಾಗವಹಿಸಬಹುದು; ಆದರೆ ದಂತ ವೈದ್ಯಕೀಯ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಹರಿರುವುದಿಲ್ಲ ಎಂದು ತಿಳಿಸಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News