ನಬಾರ್ಡ್ ನಿಂದ ರಾಜ್ಯಕ್ಕೆ ಶೇ.58ರಷ್ಟು ಹಣ ಕಡಿತ: ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ದ್ರೋಹ: ಸಿಎಂ ಸಿದ್ದರಾಮಯ್ಯ

Update: 2024-11-18 07:51 GMT

ಬೆಂಗಳೂರು, ನ.18: ನಬಾರ್ಡ್ ನಿಂದ ರಾಜ್ಯಕ್ಕೆ ಶೇ.58ರಷ್ಟು ಹಣ ಕಡಿತಮಾಡಲಾಗಿದೆ. ಆ ಮೂಲಕ ಕೇಂದ್ರ ಸರಕಾರ ರಾಜ್ಯಕ್ಕೆ ಮತ್ತೊಂದು ಮಹಾ ದ್ರೋಹ ಎಸಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಕನಕ ಜಯಂತಿ ಪ್ರಯುಕ್ತ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.

ನಬಾರ್ಡ್ ವತಿಯಿಂದ ಕಳೆದ ವರ್ಷ ರಾಜ್ಯಕ್ಕೆ 5,600 ಕೋಟಿ ರೂ. ಸಾಲ ನೀಡಲಾಗಿತ್ತು. ಆದರೆ ಈ ವರ್ಷ 2,340 ಕೋಟಿ ರೂ. ನೀಡಿದ್ದಾರೆ. ಇದು ಅನ್ಯಾಯವಲ್ಲವೇ? ಸಾಲದ ಪ್ರಮಾಣವನ್ನು ಶೇ.58ರಷ್ಟು ಕಡಿಮೆ ಮಾಡಿದ್ದಾರೆ. ಕುಮಾರಸ್ವಾಮಿ, ಪ್ರಹ್ಲಾದ ಜೋಷಿಯವರು ಕರ್ನಾಟಕದ ಮಂತ್ರಿಗಳಾಗಿ ಏನು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರೈತರಿಗೆ ಅನ್ಯಾಯ ಮಾಡಬೇಡಿ ಇದು ದ್ರೋಹದ ಕೆಲಸ ಎಂದು ಪ್ರಧಾನ ಮಂತ್ರಿಗೆ, ಹಣಕಾಸು ಸಚಿವ ನಿರ್ಮಾಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

ನಾನು ಅಧಿಕಾರಕ್ಕೆ ಬಂದ ನಂತರ 5 ಲಕ್ಷದವರೆಗೆ ಬಡ್ಡಿರಹಿತ ಸಾಲ. 15 ಲಕ್ಷದವರೆಗೆ ಶೇಕಡಾ 3% ದರದಲ್ಲಿ ಸಾಲ ನೀಡಲಾಗಿದೆ. ನಬಾರ್ಡ್ ಬರುವುದು ಹಣಕಾಸಿನ ಮಂತ್ರಿಗಳ ಕೆಳಗೆ ಬರುತ್ತದೆ. ನಿರ್ಮಲಾ ಸೀತಾರಾಮನ್ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಅನರ್ಹರ ಬಿಪಿಎಲ್ ಕಾರ್ಡ್ ಗಳಷ್ಟೇ ರದ್ದು

ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನು ಮಾತ್ರ ರದ್ದು ಮಾಡಲಾಗುವುದು. ಅರ್ಹ ಬಡವರಿಗೆ ಕಾರ್ಡು ತಪ್ಪಿಸುವುದಿಲ್ಲ ಎಂದು ಮುಖ್ಯಮಂತ್ರಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದು ನಾವೇ ಹೊರತು, ಬಿಜೆಪಿಯಾಗಲಿ ಜೆಡಿಎಸ್ ಆಗಲಿ ನೀಡಿಲ್ಲ. ಕಾರ್ಯಕ್ರಮ ಜಾರಿ ಮಾಡಿದ್ದು ಈ ಸಿದ್ದರಾಮಯ್ಯ. 2017ರಲ್ಲಿ ಒಂದು ರೂಪಾಯಿಗೆ ನೀಡುತ್ತಿದ್ದ ಅಕ್ಕಿಯನ್ನು ಉಚಿತವಾಗಿ ನೀಡಲಾಯಿತು. ಇದನ್ನು ಬಿಜೆಪಿ ಮಾಡಿಲ್ಲ. ಸುಮ್ಮನೆ ಮಾತನಾಡುತ್ತಾರೆ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿ ಇಂಥ ಯೋಜನೆಯನ್ನು ಜಾರಿ ಮಾಡಿದ್ದಾರೆ?. ಗುಜರಾತ್, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ಹರ್ಯಾಣ ಎಲ್ಲಿ ಮಾಡಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.

2023-24 ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದರು. ಕುಮಾರಸ್ವಾಮಿ ಈ ಬಗ್ಗೆ ಏನು ಕೇಳಿದ್ದಾರೆ? 15ನೇ ಹಣಕಾಸು ಯೋಜನೆಯಡಿ 11,595 ಕೋಟಿ ರೂ. ಘೋಷಣೆ ಮಾಡಿದ್ದರು. ಎಲ್ಲಿ ಕೊಟ್ಟರು. ಇದನ್ನು ನೀವು ಕೇಳುವುದಿಲ್ಲ ಎಂದರು.

56,000 ಕೋಟಿ ರೂಪಾಯಿಗಳ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದೇವೆ . ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಗಳಲ್ಲಿ ಏಕೆ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News