ಬೆಂಗಳೂರು: ಕೃಷಿ ಮೇಳದಲ್ಲಿ ಮೇಳದ ಕೇಂದ್ರ ಬಿಂದುವಾದ ‘ಕೃಷಿ ಯಂತ್ರೋಪಕರಣಗಳು’

Update: 2024-11-17 16:07 GMT

ಬೆಂಗಳೂರು: ಇಲ್ಲಿನ ಜಿಕೆವಿಕೆಯಲ್ಲಿ ಆಯೋಜಿಸಿದ್ದ ಕೃಷಿ ಮೇಳದಲ್ಲಿ ಕೃಷಿಗೆ ಅವಶ್ಯಕವಾಗಿರುವ ಸಣ್ಣ ಕುಡಗೋಲಿನಿಂದ ಹಿಡಿದು ದೊಡ್ಡ ದೊಡ್ಡ ಟ್ರಾಕ್ಟರ್, ಜೆ.ಸಿ.ಬಿ.ಗಳ ವರೆಗೂ ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಕೃಷಿ ಯಂತ್ರೋಪಕರಣ ಮಳಿಗೆಗಳೆ ಮೇಳದ ಕೇಂದ್ರ ಬಿಂದುವಾಗಿದ್ದು, ಅತಿ ಹೆಚ್ಚು ರೈತರನ್ನು ಆಕರ್ಷಿಸಿದ್ದವು.

ಆಸಕ್ತ ರೈತರು ಅಲ್ಲಿಯೇ ಮಾಹಿತಿ ಪಡೆದು ವ್ಯಾಪಾರ ಮಾಡಿ ಮನೆಗೆ ಕೊಂಡೊಯ್ದುಬಿಡಬಹದು. ಹಲವು ಅಂತರರಾಷ್ಟ್ರೀಯ ಖ್ಯಾತಿಯ ಕಂಪೆನಿಗಳು ಮೇಳದಲ್ಲಿ ಮಳಿಗೆ ಹಾಕಿ ರೈತರೇ ತಮ್ಮ ಯಂತ್ರಗಳನ್ನು ಪರೀಕ್ಷಿಸಲು ಅನುವು ಮಾಡಿದ್ದವು. ರೈತರು ಟ್ರ್ಯಾಕ್ಟರ್, ಟಿಲ್ಲರ್ ಓಡಿಸಿ, ಬೆಳೆ ಕಟಾವು ಯಂತ್ರಗಳನ್ನು ಇಂಚಿಂಚೂ ಪರೀಕ್ಷಿಸಿ ನೋಡಿದರು.

‘ಕೃಷಿ ಬಾಟ್’ ಮೂಲಕ ಕಡಲೆಕಾಯಿ ಬೀಜ ಬಿತ್ತನೆ: ರಿಮೋಟ್ ಸಿಸ್ಟಂ ಮೂಲಕವೇ ನಿಯಂತ್ರಿಸಬಹುದಾದ ಕಡಲೆಕಾಯಿ ಬಿತ್ತನೆ ಬೀಜ ಯಂತ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ್ದು, ಕೃಷಿ ಮೇಳದಲ್ಲಿ ‘ಕೃಷಿ ಬಾಟ್’ ಹೆಸರಿನ ಈ ಯಂತ್ರವನ್ನು ಪ್ರದರ್ಶಿಸಿದೆ.

ಇತ್ತೀಚಿನ ದಿನಗಳಲ್ಲಿ ಕೃಷಿ ಕೆಲಸಗಳಿಗೆ ಕೂಲಿಕಾರ್ಮಿಕರು ಸಿಗದೆ ರೈತರು ತೊಂದರೆ ಸಿಲುಕುತ್ತಿದ್ದಾರೆ. ನೆಲಗಡಲೆಯನ್ನು ಸುಲಭವಾಗಿ ಬಿತ್ತನೆ ಮಾಡಲು ಅನುಕೂಲವಾಗುವಂತೆ ವಿಶ್ವವಿದ್ಯಾಲಯವು ಬ್ಯಾಟರಿ ಚಾಲಿತ ‘ಕೃಷಿಬಾಟ್’ ಯಂತ್ರವನ್ನು ಸಿದ್ದಪಡಿಸಿದೆ. ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಇದು ನೆರವಾಗಲಿದೆ. ಒಬ್ಬ ರೈತನು ಯಂತ್ರವನ್ನು ಖರೀದಿ ಮಾಡಿ ಅಕ್ಕಪಕ್ಕದ ರೈತರಿಗೆ ಬಾಡಿಗೆಗೆ ನೀಡಬಹುದಾಗಿದೆ.

ಕೃಷಿ ಬಾಟ್ ಯಂತ್ರವು ಕೂಲಿಕಾರರ ಅಗತ್ಯ ಮತ್ತು ಶ್ರಮವಿಲ್ಲದೆ ಬೀಜ ಬಿತ್ತನೆ ಮಾಡುವುದರ ಜತೆಗೆ ರಸಗೊಬ್ಬರವನ್ನು ಸಮನಾಗಿ ಸಿಂಪಡಿಸಲಿದೆ. ಹೀಗಾಗಿ ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಗೊಬ್ಬರ ಸಿಂಪಡಿಸುವುದು ಮತ್ತು ಕೃಷಿಯ ಸಂಪೂರ್ಣ ಪ್ರಕ್ರಿಯೆಯನ್ನು ದೂರದಿಂದಲೇ ಸುಲಭವಾಗಿ ನಿಯಂತ್ರಿಸಬಹುದು. 24/7 ಕಾರ್ಯಾಚರಣೆಗೆ ಅವಕಾಶ ಕಲ್ಪಿಸುತ್ತದೆ. ಈ ಯಂತ್ರದಲ್ಲಿ ಬ್ಯಾಟರಿ ಬದಲಿಸಲು ಅವಕಾಶವಿದೆ.

ಕೃಷಿಬಾಟ್ ಸುಧಾರಿತ ಬಿತ್ತನೆ ತಂತ್ರಜ್ಞಾನ ಹೊಂದಿದ್ದು, ಪ್ರತಿ ಬೀಜವನ್ನು ಗರಿಷ್ಠ ಆಳ ಮತ್ತು ಗರಿಷ್ಠ ಇಳುವರಿಗಾಗಿ ಸಮಾನಾಂತರದಲ್ಲಿ ನೆಡಲಾಗುತ್ತದೆ. ಇದರಿಂದ ಸಾಕಷ್ಟು ಸಮಯವೂ ಉಳಿಯುತ್ತದೆ. ಕೃಷಿ ಬಾಟ್ ಯಂತ್ರದ ಸಹಾಯದಿಂದ ವ್ಯರ್ಥ ಬೀಜಗಳನ್ನು ತಡೆಯುವುದರ ಜತೆಗೆ ಇಡೀ ತೋಟದಲ್ಲಿ ಏಕರೀತಿಯಲ್ಲಿ ಬೆಳೆಯಲು ಸಹಕಾರಿಯಾಗಲಿದೆ. ಬೆಳೆಯ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ.

ಗಮನ ಸೆಳೆದ ಔಷಧ ಸಿಂಪಡಿಸುವ ಡ್ರೋನ್‍ಗಳು

ಈ ಬಾರಿಯ ಮೇಳದಲ್ಲಿ ಔಷಧ ಸಿಂಪಡಿಸುವ ಡ್ರೋನ್‍ಗಳು ರೈತರ ಗಮನಸೆಳೆದವು. ಇಂತಿಷ್ಟೇ ಪ್ರಮಾಣದಲ್ಲಿ ಔಷಧಿ ಸಿಂಪಡಿಸಬೇಕು ಎಂಬುದರ ಕುರಿತು ಡ್ರೋನ್‍ನಲ್ಲಿ ಪ್ರೋಗ್ರಾಮಿಂಗ್ ಮಾಡಲಾಗಿದೆ. ಹೀಗಾಗಿ, ಡ್ರೋನ್‍ನಲ್ಲಿ ಔಷಧಿ ಸಿಂಪಡಿಸುವಾಗ ನೆರೆಹೊರೆಯ ಬೆಳೆಗಳಿಗೆ ಅಥವಾ ಪ್ರಕೃತಿಗೆ ಯಾವುದೇ ರೀತಿ ತೊಂದರೆ ಮಾಡದಂತೆ ಡ್ರೋನ್‍ಗಳು ಕಾರ್ಯನಿರ್ವಹಿಸಲಿವೆ.

ರೈತರ ಭೂಮಿ ಸರ್ವೆ ಮಾಡುವ ಡ್ರೋನ್‍ಗಳನ್ನೂ ಮೇಳದಲ್ಲಿ ಪ್ರದರ್ಶನ ಮಾಡಲಾಗಿತ್ತು. ಮಲ್ಟಿ ಸ್ಪೆಕ್ಟ್ರಲ್ ಡ್ರೋನ್ ಬೆಳೆಗಳ ಆರೋಗ್ಯದ ಮಾಪನವನ್ನು ಮಾಡುತ್ತದೆ. ಅಂದರೆ ಸುಮಾರು 20 ನಿಮಿಷಗಳ ಕಾಲ ಹಾರುವ ಸಾಮಥ್ರ್ಯ ಹೊಂದಿರುವ ಈ ಡ್ರೋನ್, ಆ ಸಮಯದಲ್ಲಿ ಸುಮಾರು 1000 ದಿಂದ 1500 ಛಾಯಾಚಿತ್ರಗಳನ್ನು ತನ್ನಲ್ಲಿ ಸೆರೆಹಿಡಿದು, ಜಮೀನಿನ ಯಾವ ಭಾಗವು ಆರೋಗ್ಯಯುತವಾಗಿದೆ ಹಾಗೂ ಯಾವ ಭಾಗ ರೋಗಕ್ಕೆ ತುತ್ತಾಗಿದೆ ಎಂಬ ಮಾಹಿತಿಯನ್ನು ರೈತರಿಗೆ ನೀಡುತ್ತದೆ.

ಕಳೆ ತೆಗೆಯಲು ಯಂತ್ರಗಳ ಪ್ರದರ್ಶನ:ತೋಟಗಾರಿಕಾ ಬೆಳೆಗಳಲ್ಲಿ ಕಳೆ ತೆಗೆಯಲು ಕೂಲಿಕಾರರ ಕೊರತೆಯಿದ್ದು, ಹೆಚ್ಚಿನ ರೈತರು ಕಳೆನಾಶಕ ಔಷಧಗಳನ್ನು ಬಳಸುತ್ತಾರೆ. ಇದರಿಂದ ಜನರ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಹೀಗಾಗಿ, ಕಳೆ ತೆಗೆಯಲು ಯಂತ್ರಗಳು ನೆರವಾಗುತ್ತವೆ. ಈ ಬಾರಿಯ ಕೃಷಿ ಮೇಳದಲ್ಲಿ 50 ಬಗೆಯ ಟೂಲ್ಸ್‍ಗಳನ್ನು ಅಳವಡಿಸಿಕೊಳ್ಳುವ ಕಳೆ ಕೀಳುವ ಯಂತ್ರಗಳನ್ನು ಪ್ರದರ್ಶನ ಮಾಡಲಾಗಿತ್ತು.

ಯುಎನ್‍ಜಿ ಆಗ್ರೊಸ್ ಸಂಸ್ಥೆಯು ಈ ಕಳೆನಾಶಕ ಯಂತ್ರಗಳನ್ನು ಅಭಿವೃದ್ಧಿಪಡಿಸಿದ್ದು, ಕಳೆ ಕೀಳುವುದು, ಬೆಳೆಗಳಿಗೆ ಸಾಲು ಹೊಡೆಯುವುದು, ಕಾಲುವೆ ನಿರ್ಮಿಸುವುದು, ಬದು ನಿರ್ಮಿಸುವುದು ಇತ್ಯಾದಿಗಳಿಗೆ ಕೈ ಚಾಲಿತ ಯಂತ್ರಗಳನ್ನು ಮೇಳದಲ್ಲಿ ಪ್ರದರ್ಶಿಸಿತ್ತು.

ಚಾಲಕ ರಹಿತ ಟ್ಯಾಕ್ಟರ್ ಪ್ರದರ್ಶನ: ಅಟೋಮ್ಯಾಟಿಕ್ ಟ್ರ್ಯಾಕ್ಟರ್ ಮೌಂಟೆಡ್ ಸ್ಪೇಯರ್ ಎಂಬ ಹೆಸರಿನಲ್ಲಿ ಕೃಷಿ ಮೇಳದಲ್ಲಿ ಚಾಲಕರಹಿತ ಟ್ಯಾಕ್ಟರ್ ಪ್ರದರ್ಶನಕ್ಕಿಡಲಾಗಿತ್ತು. ಈ ಚಾಲಕರಹಿತ ಟ್ರ್ಯಾಕ್ಟರ್‍ನಿಂದ ದ್ರವ ರೂಪದ ರಸಗೊಬ್ಬರ, ಕಳೆನಾಶಕ, ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಯಾವ ರೀತಿ ಸಿಂಪಡಿಸಬಹುದು ಎಂಬುದನ್ನು ಪ್ರದರ್ಶಿಸಿ ರೈತರಿಗೆ ಮಾಹಿತಿ ನೀಡಲಾಯಿತು.

ತೆಂಗಿನಕಾಯಿ ಸುಲಿಯುವ ಯಂತ್ರ: ಪೆಡಲ್ ತುಳಿದು ಸೈಕಲ್ ಓಡಿಸುವಂತೆ, ಪೆಡಲ್ ತುಳಿಯುವ ಮೂಲಕ ಸುಲಭವಾಗಿ ತೆಂಗಿನಕಾಯಿ ಸುಲಿಯಬಹುದಾದ ಯಂತ್ರವನ್ನು ಕೃಷಿ ಮೇಳದಲ್ಲಿ ಪ್ರದರ್ಶನ ಮಾಡಲಾಯಿತು. ಯಂತ್ರವನ್ನು ಬಳಸಿ ಗಂಟೆಗೆ ಸುಮಾರು 80 ರಿಂದ 100 ತೆಂಗಿನಕಾಯಿ ಸುಲಿಯಬಹುದು. ಗುಜರಿಗೆ ಹಾಕಿದ ಹಳೇ ಸೈಕಲ್‍ಗಳನ್ನು ಬಳಸಿಕೊಂಡು ಯಂತ್ರವನ್ನು ತಯಾರಿಸಬಹುದಾಗಿದೆ. ಈ ಸುಧಾರಿತ ತೆಂಗಿನಕಾಯಿ ಯಂತ್ರಕ್ಕೆ 1,500 ರೂ. ಬೆಲೆ ನಿಗದಿಪಡಿಸಲಾಗಿದೆ.

ಕೈಯಿಂದ ತೆಂಗಿನಕಾಯಿ ಸುಲಿಯುವ ಯಂತ್ರಗಳಲ್ಲಿ ಕೈ ಮತ್ತು ಸೊಂಟಕ್ಕೆ ತುಂಬಾ ಶ್ರಮ ಬೇಕಾಗುತ್ತದೆ. ಆದರೆ, ಕಾಲಿನಿಂದ ಸುಲಿಯುವ ಯಂತ್ರದಲ್ಲಿ ಬಹಳ ಸುಲಭವಾಗಿ ಸುಲಿಯಬಹುದು. ಸಾಕಷ್ಟು ಸಮಯ ಕುಳಿತುಕೊಂಡು ತೆಂಗಿನಕಾಯಿ ಸುಲಿಯಬಹುದು. ಆಯಾಸ ಆಗುವುದಿಲ್ಲ, ಮಹಿಳೆಯರೂ ಬಹಳ ಸುಲಭವಾಗಿ ತೆಂಗಿನಕಾಯಿ ಸುಲಿಯಬಹುದಾಗಿದೆ.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News