ನ.23-24ರಂದು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸಮಾವೇಶ : ಮುಹಮ್ಮದ್ ಉಬೇದುಲ್ಲಾ ಶರೀಫ್
ಬೆಂಗಳೂರು : ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ನ ರಾಷ್ಟ್ರೀಯ ಮಟ್ಟದ ಸಮಾವೇಶವು ಬೆಂಗಳೂರಿನಲ್ಲಿ ನ.23 ಹಾಗೂ 24ರಂದು ಆಯೋಜಿಸಲಾಗಿದೆ ಎಂದು ಸಮಾವೇಶದ ಸ್ವಾಗತ ಸಮಿತಿ ಹಾಗೂ ಕೋರ್ ಕಮಿಟಿ ಸದಸ್ಯ ಮುಹಮ್ಮದ್ ಉಬೇದುಲ್ಲಾ ಶರೀಫ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿರುವ ದಾರೂಲ್ ಉಲೂಮ್ ಶಬೀಲುರ್ರಶಾದ್(ಅರೇಬಿಕ್ ಕಾಲೇಜು)ನಲ್ಲಿ ಸಮಾವೇಶದ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ನ ಮೂರನೇ ಸಮಾವೇಶ ಇದಾಗಿದೆ. ಇದಕ್ಕೂ ಮುನ್ನ 1975 ಹಾಗೂ 2000ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಸಮಾವೇಶವನ್ನು ಆಯೋಜಿಸಲಾಗಿತ್ತು. ದೇಶದೆಲ್ಲೆಡೆಯಿಂದ 450ಕ್ಕೂ ಹೆಚ್ಚು ಅತಿಥಿಗಳು ಈ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಲಿದ್ದಾರೆ. 350 ಅತಿಥಿಗಳಿಗೆ ಸಬೀಲುರ್ರಶಾದ್ ಆವರಣದಲ್ಲೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ನ.23ರಂದು ಸಬೀಲುರ್ರಶಾದ್ ನಲ್ಲಿ ಸಮಾವೇಶದ ಉದ್ಘಾಟನೆ ಆಗಲಿದ್ದು, ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ವಿಧೇಯಕದ ಕುರಿತು ಕೂಲಂಕಷವಾಗಿ ಚರ್ಚೆ ನಡೆಯಲಿದೆ. ಅಲ್ಲದೇ, ಮುಂದಿನ ನಡೆಯ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಬೇದುಲ್ಲಾ ಶರೀಫ್ ತಿಳಿಸಿದರು.
ನ.25ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮುಸ್ಲಿಮರು ಮುಂದೆ ಏನು ಮಾಡಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಲಾಗುವುದು. ನ.24ರಂದು ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಬೃಹತ್ ಬಹಿರಂಗ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸ್ವಾಗತ ಸಮಿತಿಯ ಮತ್ತೊರ್ವ ಸದಸ್ಯ ಸೈಯದ್ ಅಶ್ರಫ್ ಮಾತನಾಡಿ, ನ.23ರಂದು ಸಬೀಲುರ್ರಶಾದ್ನಲ್ಲಿ ಆರು ವಿವಿಧ ಬಗೆಯ ಸಭೆಗಳು ನಡೆಯಲಿವೆ. ಉದ್ಘಾಟನಾ ಸಭೆಯು ಬೆಳಗ್ಗೆ 11 ಗಂಟೆಯಿಂದ ಆರಂಭವಾಗಲಿದೆ. ಅದರಲ್ಲಿ ಪರ್ಸನಲ್ ಲಾ ಬೋರ್ಡ್ನ ಸಾಮಾನ್ಯ ಸದಸ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಎರಡನೇ ಸಭೆಯಲ್ಲಿ ಮಂಡಳಿಯ ಸಂಸ್ಥಾಪಕ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾವೇಶದ ಕೋರ್ ಕಮಿಟಿ ಸದಸ್ಯರಾದ ಏಜಾಝ್ ಅಲಿ ಜೌಹರಿ, ಅಬ್ದುಲ್ ಸುಭಾನ್, ಸೈಯದ್ ಶುಜಾವುದ್ದೀನ್, ಮುಬೀನ್ ಮುನವ್ವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.