‘ಕೋವಿಡ್ ತನಿಖೆ’ ಮುಖಭಂಗವೇ ಕಟ್ಟಿಟ್ಟ ಬುತ್ತಿ: ವಿಜಯೇಂದ್ರ
ಬೆಂಗಳೂರು : ‘ಜನಪರ ಆಡಳಿತ ನೀಡುತ್ತಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಅಪಪ್ರಚಾರ ನಡೆಸಿದವರಿಗೆ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ. ಆದರೆ, ಇದೀಗ ತಮ್ಮ ಭ್ರಷ್ಟ ಮುಖ ಮುಚ್ಚಿಕೊಳ್ಳಲು ಕೋವಿಡ್ ಅವ್ಯವಹಾರ ನಡೆದಿದೆ ಎಂಬ ಮಧ್ಯಂತರ ವರದಿಯನ್ನು ತರಾತುರಿಯಲ್ಲಿ ತರಿಸಿಕೊಂಡು ‘ಸಿಟ್’ ರಚಿಸಲು ಹೊರಟಿದ್ದೀರಿ ಈ ತನಿಖೆಯಿಂದಲೂ ನಿಮಗೆ ಮುಖಭಂಗ ಕಟ್ಟಿಟ್ಟ ಬುತ್ತಿಯಾಗಲಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಸಿದ್ದಾರೆ.
ಶನಿವಾರ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಶೇ.40 ಕಮಿಷನ್ ಎಂಬ ಸುಳ್ಳು ಅಪಪ್ರಚಾರ ನಡೆಸಿದ್ದ ಕಾಂಗ್ರೆಸ್ ಆರೋಪ ಆಧಾರರಹಿತ ಎಂಬುದು ಇದೀಗ ಲೋಕಾಯುಕ್ತ ತನಿಖೆಯಲ್ಲೇ ಬಹಿರಂಗವಾಗಿದೆ. ಭ್ರಷ್ಟತೆಯ ಕೂಪದಲ್ಲಿ ಮುಳುಗಿರುವ ಕಾಂಗ್ರೆಸ್ ಸರಕಾರ ತಾನು ಹೇಳುವುದೆಲ್ಲಾ ಸುಳ್ಳು, ಕಟ್ಟುಕಥೆ ಕಟ್ಟುವಲ್ಲಿ ತಾನು ನಿಸ್ಸೀಮ ಎಂಬುದು ಸಾಬೀತಾಗಿದೆ’ ಎಂದು ಟೀಕಿಸಿದ್ದಾರೆ.
‘ನೈತಿಕ ಮಾರ್ಗದಲ್ಲಿ ಎಂದೂ ಅಧಿಕಾರ ಹಿಡಿಯದ ಕಾಂಗ್ರೆಸ್ಸಿಗರು ದುರ್ಮಾರ್ಗ, ಅನೀತಿ, ಅಪಪ್ರಚಾರ ಹಾಗೂ ಸಮಾಜ ಒಡೆಯುವ ಕೆಲಸಗಳಿಂದಲೇ ಅಧಿಕಾರ ಕಬಳಿಸಿದ್ದಾರೆಂಬುದಕ್ಕೆ ಪ್ರಸ್ತುತ ಬಹಿರಂಗವಾಗಿರುವ ಲೋಕಾಯುಕ್ತ ವರದಿ ಸಾಕ್ಷಿ ಹೇಳುತ್ತಿದೆ. ಕರ್ನಾಟಕದ ಜನತೆಯನ್ನು ವಂಚಿಸಿ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಈ ಕೂಡಲೇ ಅಧಿಕಾರದಿಂದ ಕೆಳಗಿಳಿದು ಕರ್ನಾಟಕದ ಜನತೆಯ ಕ್ಷಮೆ ಕೋರಲಿ ಎಂದು ಅವರು ಒತ್ತಾಯಿಸಿದ್ದಾರೆ.
‘ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವಾಗಲೇ ಲೋಕಾಯುಕ್ತ ತನಿಖಾ ವರದಿ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಕಾಂಗ್ರೆಸ್ಸಿಗರು ಸಮಜಾಯಿಸಿ ನೀಡುವುದಕ್ಕೆ ಅವಕಾಶವೇ ಇಲ್ಲ. ಸದ್ಯ ಬಾಕಿ ಬಿಲ್ ಪಾವತಿಯಾಗದೆ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಗುತ್ತಿಗೆದಾರರು ರಾಜ್ಯದಲ್ಲಿರುವುದು ಶೇ.40ರಷ್ಟು ಅಲ್ಲ, ಶೇ.80ರಷ್ಟು ಎಂಬ ಅಸಲಿ ಸತ್ಯವನ್ನು ಬಹಿರಂಗ ಪಡಿಸುತ್ತಿದ್ದಾರೆ.
ಒಂದರ ಮೇಲೊಂದು ಹಗರಣಗಳ ತನಿಖೆಯ ಕಾನೂನಿನ ಉರುಳು ಸಿಎಂ ಹಾಗೂ ಸರಕಾರವನ್ನು ಸುತ್ತಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಶಾಸಕರು ಮಾರಾಟವಾಗುತ್ತಿದ್ದಾರೆಂದು ಸಿಎಂ ಅಧಿಕೃತ ಹೇಳಿಕೆ ನೀಡಿ ಕರ್ನಾಟಕದ ಗೌರವವನ್ನು ಹರಾಜು ಹಾಕುತ್ತಿದ್ದಾರೆ’ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.