ದಲಿತ ಹೋರಾಟಕ್ಕೆ ಕಮ್ಯುನಿಸ್ಟರ ಬೆಂಬಲ ಅಗತ್ಯ : ಡಾ.ಬಂಜಗೆರೆ ಜಯಪ್ರಕಾಶ್
ಬೆಂಗಳೂರು : ದಲಿತ ಸಮುದಾಯದವರು ಮಾಡುವ ಹೋರಾಟಕ್ಕೆ ಕಮ್ಯುನಿಸ್ಟರು ಬೆಂಬಲಿಸಬೇಕು ಎಂದು ಹಿರಿಯ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಸಲಹೆ ನೀಡಿದ್ದಾರೆ.
ಶನಿವಾರ ನಗರದ ಸೌಹಾರ್ದ ಸಭಾಂಗಣದಲ್ಲಿ ಕ್ರಿಯಾ ಮಾದ್ಯಮದ ವತಿಯಿಂದ ಆಯೋಜಿಸಿದ್ದ ‘ಆರ್.ಬಿ.ಮೋರೆ- ಮೊದಲ ದಲಿತ ಕಮ್ಯುನಿಸ್ಟ್’ ಅವರ ಸ್ವ ಚರಿತ್ರೆ ಮತ್ತು ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ಅಂಬೇಡ್ಕರ್, ಮೋರೆ ಮತ್ತು ಇಂದಿನ ಸಮರಶೀಲ ದಲಿತ ಚಳವಳಿ ಸವಾಲುಗಳು, ಸಾಧ್ಯತೆಗಳು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕ್ರಾಂತಿಗೆ ಪೂರಕವಾಗಿರದಿದ್ದರೂ, ಪ್ರಜಾತಾಂತ್ರಿಕ ಸುಧಾರಣೆವಾದಿಯ ಹಂತಕ್ಕೆ ಬೇಕಾಗಿರುವ ಹೆಜ್ಜೆಯಾಗಿರುವುದರಿಂದ ಪ್ರಜಾಪ್ರಭುತ್ವ ದೃಷ್ಟಿಯಿಂದ ಎಲ್ಲರೂ ಮುಂದಾದಾಗ ಮಾತ್ರ ಸಂಪೂರ್ಣ ಕ್ರಾಂತಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಎಲ್ಲೇ ದಲಿತರ ಮೇಲೆ ದೌರ್ಜನ್ಯ ನಡೆದಾಗ ಅವರ ಜತೆಗೆ ಕಮ್ಯುನಿಸ್ಟರು ಎಡಬಿಡೆದೆ ನಿಂತಾಗ ಮಾತ್ರ ಅವರಿಗೆ ನಂಬಿಕೆ ಹುಟ್ಟಿಸಲು ಸಾಧ್ಯವಾಗುತ್ತದೆ. ಆರ್.ಬಿ.ಮೋರೆ ಅವರ ಜೀವನ ಕಥನ ದಲಿತರ ಹೋರಾಟದ ಬಗೆಗಿನ ಪುನಾರಾವಲೋಕನ, ಮತ್ತು ಕಮ್ಯುನಿಸ್ಟ್ ಕಾರ್ಯಕರ್ತರ ಜಾತಿಯ ಪ್ರಶ್ನೆಯ ಕುರಿತ ಪುನರಾವಲೋಕನವನ್ನು ಕಾಣಬಹುದು ಎಂದು ತಿಳಿಸಿದರು.
ಮೋರೆ ಅವರ ಗ್ರಹಿಕೆ ಸೂಕ್ಷ್ಮವಾಗಿದೆ. ಅಂಬೇಡ್ಕರ್ ಮತ್ತು ಕಾರ್ಲ್ಮಾಕ್ರ್ಸ್ ಅವರ ಕುರಿತು ಅಧ್ಯಯನ ಮಾಡಿದ್ದರು. ಅವರು ಅಂಬೇಡ್ಕರ್ ಅವರ ಅಭಿಮಾನಿಯಾಗಿದ್ದು, ಸಮಗ್ರ ಕ್ರಾಂತಿಯ ಹೊರತಾಗಿ ದಲಿತರ ಎಲ್ಲ ಸಮಸ್ಯೆಗಳು ಪೂರ್ಣವಾಗಿ ಬಗೆಹರಿಯುದಿಲ್ಲ. ಜತೆಗೆ ಭಾರತದಲ್ಲಿ ಜಾತಿ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಕಮ್ಯುನಿಷ್ಟ್ ಪಕ್ಷ ಬೆಳೆಯುವದಿಲ್ಲ ಎಂಬುದು ಮೋರೆ ಅವರ ಅಭಿಪ್ರಾಯವಾಗಿತ್ತು ಎಂದು ತಿಳಿಸಿದರು.
ದಲಿತ ಕಾರ್ಯಕರ್ತರ ಆಕ್ರೋಶ ಮತ್ತು ಕಮ್ಯುನಿಸ್ಟ್ ಕಾರ್ಯಕರ್ತರ ಆಕ್ರೋಶ ಮತ್ತು ಆಳವಾದ ಅಧ್ಯಯನ ಒಂದಾಗಿದ್ದರೆ, ಚಳವಳಿಗಳ ಪರಿಸ್ಥಿತಿ ಬೇರೆ ಇರುತ್ತಿತ್ತು. ಬಿಜೆಪಿ- ಆರೆಸ್ಸೆಸ್ಗೆ ಅಧಿಕಾರ ಬಿಟ್ಟುಕೊಡುತ್ತಿರಲಿಲ್ಲ. ಅದಕ್ಕಾಗಿ ದಲಿತರು ಮಾಡುವ ಹೋರಾಟಕ್ಕೆ ಕಮ್ಯುನಿಸ್ಟರು ಬೆಂಬಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷ ಅಶೋಕ್ ಧವಳೆ, ಹಿರಿಯ ಲೇಖಕ ಅಬ್ದುಲ್ ರೆಹಮಾನ್ ಪಾಷಾ, ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ, ಆರ್.ಮೋಹನ್ ರಾಜ್, ಎನ್.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
‘ಕಮ್ಯುನಿಸ್ಟ್ ಎಂದರೆ ಪಕ್ಷ ಬೇರೆ ಪಕ್ಷದ ಹಾಗೆ ಅದು ಕೂಡ ಒಂದು ಪಕ್ಷಾಗಿದೆ. ಅದರಲ್ಲಿರುವ ವಿಚಾರಗಳು ಪೂರಕವಾಗಿರಬಹುದು ಎನಿಸುತ್ತದೆ. ಮೀಸಲಾತಿ ಇಲ್ಲದೇ ಇದ್ದರೆ ನನಗೆ ಕೆಲಸ ಸಿಗುತ್ತಿರಲಿಲ್ಲ. ಇಲ್ಲಿ ನಿಂತು ಮಾತಾಡುತ್ತಿರಲಿಲ್ಲ. ಅಂಬೇಡ್ಕರ್ ಅವರು ಕಟ್ಟಿದ ಕನಸು ತುಂಬಾ ದೊಡ್ಡದು. ಮೋರೆ ಅವರ ಕನಸು ಕೂಡ ಅದೇ ಆಗಿತ್ತು. ಅಸ್ಪಶ್ಯತೆ ಮುಕ್ತ ಭಾರತ ಬೇಕಾಗಿದೆ. ಗಾಯಗೊಂಡರೇ ಮಾತನಾಡುತ್ತೇವೆ. ಗಾಯ ಮಾಡಿದವರಿಗೆ ಏನು ಅಲ್ಲವಾಗಿದೆ’
-ಸುಬ್ಬು ಹೊಲೆಯಾರ್, ಹಿರಿಯ ಸಾಹಿತಿ