ಸಂವಿಧಾನ ಆತ್ಮವಿಶ್ವಾಸ ತುಂಬುತ್ತದೆ : ನ್ಯಾ.ನಾಗಮೋಹನದಾಸ್
ಬೆಂಗಳೂರು : ಸಂವಿಧಾನ ಈ ಕಾಲದ ಧರ್ಮವಾಗಿದ್ದು, ಇದನ್ನು ಓದುವುದರಿಂದ ಓದುಗರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬುತ್ತದೆ ಎಂದು ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಸಂವಿಧಾನ ಅಭಿಯಾನ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘1949ರ ನ.26ರಂದು ಭಾರತದ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡ ದಿನ. ಭಾರತದ ಸಾರ್ವಭೌಮ, ಸಮಾಜವಾದಿ, ಧರ್ಮ ನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕೆ ಸಂವಿಧಾನವೇ ದಿವ್ಯ ಮಂತ್ರ ಮತ್ತು ಶಕ್ತಿಯಾಗಿದೆ ಎಂದು ನುಡಿದರು.
ವಿದ್ಯಾರ್ಥಿ ದಿಶೆಯಲ್ಲಿದ್ದಾಗ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನನಗೆ ಜೀವನದಲ್ಲಿ ಸಾಧಿಸುತ್ತೇನೆನ್ನುವ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಯಿತು. ಆ ವಿಶ್ವಾಸವು ನನ್ನನ್ನು ವಕೀಲನಾಗುವುದಕ್ಕೆ ಪ್ರೇರಣೆ ಮಾಡಿತು. ಮುಂದೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಾ ಸಂವಿಧಾನ ಮತ್ತು ಕಾನೂನಿನ ಅರಿವಿನಿಂದಾಗಿ ಹೈಕೋರ್ಟಿನಲ್ಲಿ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದೆ. 3 ಸಾವಿರಕ್ಕೂ ಹೆಚ್ಚಿನ ತೀರ್ಪುಗಳನ್ನು ನೀಡುವಲ್ಲಿ ಸಂವಿಧಾನದ ಅರಿವು ಕಾರಣವಾಯಿತು ಎಂದು ಅವರು ತಿಳಿಸಿದರು.
ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಸಂವಿಧಾನದ ಅರಿವನ್ನು ಮೂಡಿಸುವಲ್ಲಿ ಸಾವಿರಕ್ಕೂ ಹೆಚ್ಚಿನ ಸಂವಿಧಾನ ಅಭಿಯಾನ ಕಾರ್ಯಕ್ರಮ ಮತ್ತು ಕಾರ್ಯಾಗಾರಗಳನ್ನು ಏರ್ಪಡಿಸುತ್ತಾ ಬಂದಿದ್ದೇವೆ ಎಂದು ನಾಗಮೋಹನ್ ದಾಸ್ ಮಾಹಿತಿ ನೀಡಿದರು.
ರಾಜ್ಯದ ವಿವಿಧ ಕಾಲೇಜುಗಳ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸಂವಿಧಾನ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ವಿಜೇತರಾದವರಿಗೆ ಸಂವಿಧಾನ ದಿನದಂದು ಬಹುಮಾನ ವಿತರಿಸಲಾಗುವುದು. ಈ ವೇಳೆ ಪ್ರಾಂಶುಪಾಲ ಡಾ.ಪಿ.ಟಿ.ಶ್ರೀನಿವಾಸ ನಾಯಕ, ಅಭಿಯಾನದ ಸಂಚಾಲಕ ಬಿ. ರಾಜಶೇಖರ ಮೂರ್ತಿ, ನಿವೃತ್ತ ಅಧಿಕಾರಿ ಭೀಮಾಶಂಕರ್, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ಶಶಿಕಲಾ, ಕನ್ನಡ ಸಂಘದ ಸಂಚಾಲಕ ಡಾ.ರುದ್ರೇಶ್ ಅದರಂಗಿ ಭಾಗವಹಿಸಿದ್ದರು.